ಛೋಟಾ ರಾಜನ್ ಆಸ್ಪತ್ರೆಯಿಂದ ಬಿಡುಗಡೆ – ತಿಹಾರ್ ಜೈಲಿಗೆ ವಾಪಸ್
ನವದೆಹಲಿ: ದೆಹಲಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಭೂಗತ ಪಾತಕಿ ಛೋಟಾ ರಾಜನ್ ಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಜೈಲಿನಿಂದ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದರು.. ಇದೀಗ ಏಮ್ಸ್ ನಿಂದ ಮತ್ತೆ ವಾಪಸ್ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 61 ವರ್ಷದ ರಾಜನ್ಗೆ ಚಿಕಿತ್ಸೆ ನೀಡಿ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಕಾರಾಗೃಹ ವಿಭಾಗದ ಡಿಜಿ ಸಂದೀಪ್ ಗೋಯಲ್ ತಿಳಿಸಿದ್ದಾರೆ. ಕೋವಿಡ್ ಸೋಂಕು ದೃಢಪಟ್ಟ ಕಾರಣ ಕಳೆದ ಏಪ್ರಿಲ್ನಲ್ಲಿಯೂ ರಾಜನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಬಳಿಕ ಮತ್ತೆ ಜೈಲಿಗೆ ಕರೆದೊಯ್ಯಲಾಗಿತ್ತು. ಇಂಡೋನೇಷ್ಯಾದ ಬಾಲಿಯಿಂದ 2015ರಲ್ಲಿ ಗಡಿಪಾರಾಗಿದ್ದ ಛೋಟಾ ರಾಜನ್ನನ್ನು ಹೆಚ್ಚಿನ ಭದ್ರತೆಯೊಂದಿಗೆ ತಿಹಾರ್ ಜೈಲಿನಲ್ಲಿರಿಸಲಾಗಿದೆ.