Chris Gayle : ಟಿ-20 ಯಲ್ಲಿ 14 ಸಾವಿರ ರನ್ಸ್
ಸೇಂಟ್ ಲೂಸಿಯಾ : ಯುನಿವರ್ಸಲ್ ಬಾಸ್.. ಹಾರ್ಡ್ ಹಿಟ್ಟರ್ ಕ್ರಿಸ್ ಗೇಲ್ ತೂಫಾನಿ ಇನ್ನಿನ್ಸ್ ನೆರವಿನಿಂದ ಆಸೀಸ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ.
ಇದರೊಂದಿಗೆ ಆಸೀಸ್ ವಿರುದ್ಧದ ಐದು ಪಂದ್ಯಗಳ ಟಿ20ನಲ್ಲಿ ಇನ್ನೂ ಎರಡು ಪಂದ್ಯಗಳಿರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
ಇನ್ನು ಮ್ಯಾಚ್ ವಿಷಯಕ್ಕೆ ಬಂದ್ರೆ 142 ರನ್ ಗಳ ಸಾಧಾರಣ ಮೊತ್ತದ ಗುರಿಯೊಂದಿಗೆ ಅಖಾಡಕ್ಕೀಳಿದ ವೆಸ್ಟ್ ಇಂಡೀಸ್, ಗೇಲ್ (38 ಎಸೆತಗಳಲ್ಲಿ 67; 4 ಬೌಂಡರಿ, 7 ಸಿಕ್ಸರ್) ವಿದ್ವಂಸಕ ಆಟ, ನಾಯಕ ನಿಕೋಲಸ್ ಪೂರನ್ (32, 27 ಎಸೆತಗಳು; 4 ಬೌಂಡರಿ, ಒಂದು ಸಿಕ್ಸರ್) ಸಮಯೋಚಿತ ಆಟದೊಂದಿಗೆ ವಿಂಡೀಸ್ 14.5 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ಗೆ 141 ರನ್ ಗಳಿಸಿತು. ಆಸೀಸ್ ಪರ ಹೆನ್ರಿಕ್ಸ್ 33 ಮತ್ತು ನಾಯಕ ಆರನ್ ಫಿಂಚ್ 30 ರನ್ ಗಳಿಸಿದರು. ವಿಂಡೀಸ್ ಬೌಲರ್ಗಳಲ್ಲಿ ಶೆಲ್ಡನ್ ಕಾಟ್ರೆಲ್ 3 ಮತ್ತು ಆಂಡಿ ರಸ್ಸೆಲ್ 2 ವಿಕೆಟ್ ಪಡೆದರು.
ಗೇಲ್ ರೆಕಾರ್ಡ್
ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಮತ್ತೊಂದು ಅಪರೂಪದ ದಾಖಲೆ ಸೃಷ್ಠಿಸಿದರು. ಗೇಲ್ ಟಿ 20 ಮಾದರಿಯಲ್ಲಿ 14,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಲ್ಲದೆ ಐದು ವರ್ಷಗಳ ನಂತರ ವಿಂಡೀಸ್ ಪರ ಅರ್ಧಶತಕ ಬಾರಿಸಿದ ಗೇಲ್, ಅದೇ ಜೋಶ್ನಲ್ಲಿ ಸರಣಿಯನ್ನು ವಿಂಡೀಸ್ಗೆ ಗೆಲ್ಲಿಸಿಕೊಟ್ಟರು. ಪಂದ್ಯದಲ್ಲಿ ಗೇಲ್ ಸಿಕ್ಸರ್ ಹ್ಯಾಟ್ರಿಕ್ ಸಿಡಿಸಿ ಅರ್ಧಶತಕ ಪೂರೈಸಿದರು.