ಕಾಡಿನ ಗಿರಿಜನರ ಸಂಘರ್ಷದ ಬದುಕಿನ ಸಾಕ್ಷಿಯಿದು; ಇವರ ಅಳಲು ಕೇಳುವವರಾರು? citizen journalism episode 1
ಕಾರ್ಲೆ… ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅತೀ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿ. ಕಳಸದಿಂದ ಸರಿಸುಮಾರು ಹದಿನೈದು ಕಿಲೋಮೀಟರ್ ದೂರವಿರುವ ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನ ಪ್ರದೇಶ. ಸುಮಾರು ಇಪ್ಪತ್ತು ಇಪ್ಪತ್ತೈದು ಗಿರಿಜನ ಕುಟುಂಬಗಳು ಇಲ್ಲಿ ವಾಸವಾಗಿವೆ. ಇಲ್ಲೊಂದು ದೊಡ್ಡ ಹಳ್ಳ ಹರಿಯುತ್ತದೆ. ಈ ಚಿತ್ರದಲ್ಲಿ ಕಾಣಿಸುವ ಮರದ ಸಂಕವೇ ಆ ಹಳ್ಳ ದಾಟಲು ಇವರ ಮಳೆಗಾಲದ ಸೇತುವೆ!. ಅದರಲ್ಲೇ ವೃದ್ಧರು, ಹೆಂಗಸರು, ಮಕ್ಕಳು ಎಲ್ಲರೂ ಎಲ್ಲರೂ ಜಡಿ ಮಳೆಯಲ್ಲಿ ದಾಟಬೇಕು. ಯಾರಿಗಾದರೂ ಅನಾರೋಗ್ಯವಾದರೆ ಅವರನ್ನು ಆ ದೇವರೇ ಕಾಪಾಡಬೇಕು.. citizen journalism episode 1

ಈ ಹಳ್ಳ ದಾಟಲು ಇದ್ದ ಸಣ್ಣ ಸೇತುವೆ 2019ರ ಮಹಾಮಳೆಯಲ್ಲಿ ಕೊಚ್ಚಿ ಹೋಗಿದೆ. ನಂತರ ಎಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇಲ್ಲಿನ ಜನ ಮನವಿ ಕೊಟ್ಟು ಕೊಟ್ಟು ಸುಸ್ತಾಗಿದ್ದಾರೆ. ಕಾಡಂಚಿನ ಈ ಜನರ ಕಷ್ಟ ಕೇಳುವವರೇ ಇಲ್ಲ. ಊರಿಗೆ ಸರಿಯಾದ ರಸ್ತೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳೆಲ್ಲಾ ದೂರದ ಮಾತು ಬಿಡಿ. ನಿನ್ನೆ ನಾವು ಈ ಊರಿಗೆ ಹೋದಾಗ ಗ್ರಾಮ ಪಂಚಾಯತ್ ಚುನಾವಣೆಯ ಮತಯಾಚನೆಗೆ ಎರಡು ಪಿಕಪ್, ಎರಡು ಜೀಪುಗಳಲ್ಲಿ ಭರ್ತಿ ಜನ ಬಂದಿದ್ದರು. ಇನ್ನವರನ್ನು ಈ ಊರು ನೋಡುವುದು ಮುಂದಿನ ಚುನಾವಣೆಗೇ. ಅಧಿಕಾರಿಗಳೆಲ್ಲಾ ಈ ಕಡೆ ತಲೆಹಾಕುವುದಿಲ್ಲ ಬಿಡಿ. ಅರಣ್ಯ ಇಲಾಖೆಯವರು ಒಮೊಮ್ಮೆ ಬರುತ್ತಾರೆಂದು ಊರವರು ಹೇಳಿದರೂ, ಅವರು ಮತ್ತು ಹಳ್ಳಿಯವರ ನಡುವೆ ಸಂಬಂಧ ಸೌಹಾರ್ದಯುತವಾಗಿಲ್ಲ ಅಂತ ಅಲ್ಲಿನ ಕೆಂಪೇಗೌಡರ ಮಾತಿನಲ್ಲೇ ಸ್ಪಷ್ಟವಾಗಿ ಪ್ರತಿಧ್ವನಿಸುತಿತ್ತು.
ಇದು ಕೇವಲ ‘ಕಾರ್ಲೆ’ಯೊಂದರ ಕಥೆಯಲ್ಲ. ನಿರೂಪಣೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಾ ಹೋದರೆ ಪಶ್ಚಿಮ ಘಟ್ಟದ ತಪ್ಪಲಿನ ಬಹುಪಾಲು ಕಾಡಂಚಿನ ಪ್ರದೇಶಗಳ ಕಥೆಯೂ ಇದೇನೇ. ಬಹುಶಃ ಜನಸ್ನೇಹಿ ಸರ್ಕಾರವೊಂದು ಇದ್ದಿದ್ದರೆ, ಅಧಿಕಾರಿಗಳು ಸೂಕ್ಷ್ಮ ಸಂವೇದನೆಯವರಾಗಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳವೊಂದನ್ನು ದಾಟಲು ಯಕಃಶ್ಚಿತ್ ಸೇತುವೆ ಮಾಡಲಾಗದ ವ್ಯವಸ್ಥೆಗೆ, ಅದಕ್ಕೆ ನೂರು ಕುಂಟು ನೆಪ ಹೇಳುವ ಸರ್ಕಾರಿ ನೌಕರರಿಗೆ, ಇಲ್ಲದೇ ಹೋದ ನಿಯಮ-ಮಾರ್ಗಸೂಚಿ ಅಂತ ಅಡ್ಡಗಾಲು ಹಾಕುವ ಅಧಿಕಾರಿಗಳಿಗೆ, ಬರೇ ಭರವಸೆಯಲ್ಲೇ ಕಾಲ ಕಳೆಯುವ ಜನಪ್ರತಿನಿಧಿಗಳಿಗೆ ನನ್ನ ಸ್ಪಷ್ಟ ಧಿಕ್ಕಾರವಿದೆ.

ಇಲ್ಲಿನ ಜನರೇನು ಚತುಷ್ಪಥ ಹೆದ್ದಾರಿ, ಸುರಂಗ ಮಾರ್ಗ, ರೈಲ್ವೇ, ರೂಪ್ ವೇ. ಏನು ಏನೂ ಕೇಳುತ್ತಿಲ್ಲ. ಅವರಿಗೆ ನಿಮ್ಮ ಅಭಿವೃದ್ಧಿಯ ತೆವಲು ಹತ್ತಿಲ್ಲ. ಹಿಂಗಿದ್ದೆಲ್ಲಾ ಹಡಬೆ ಕೆಲಸ ಮಾಡೋಕೆ ದುಡ್ಡಿರುವವರಿಗೆ ಯಕಃಶ್ಚಿತ್ ಸೇತುವೆ ಮಾಡುವುದಕ್ಕೆ ಅನುದಾನವಿಲ್ಲ. ಥತ್, ನಾಚಿಕೆಗೇಡು. ‘ಅವರದೂ ಒಂದು ಬದುಕಿದೆ’ ಎಂದು ಯಾರಿಗೂ ಏಕೆ ಅರ್ಥವಾಗುತ್ತಿಲ್ಲ?
–ನಾಗರಾಜ ಕೂವೆ
ಪರಿಸರ ಹೋರಾಟಗಾರರು ಮತ್ತು ಬರಹಗಾರರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








