ಪರ್ನೆಮ್, ಮೇ 22 : ಗೋವಾದ ಪ್ರಸಿದ್ಧ ಅರಾಂಬೋಲ್ ಸಿಹಿ ನೀರಿನ ಸರೋವರವನ್ನು ಸ್ವಚ್ಛಗೊಳಿಸಲು ರಷ್ಯಾ ಪ್ರವಾಸಿಗರು ಮುಂದಾಗಿದ್ದರಿಂದ, ಸ್ಥಳೀಯ ಪ್ರಾಧಿಕಾರ ಮತ್ತು ಅಲ್ಲಿನ ನಿವಾಸಿಗಳು ಕಣ್ಣುಮುಚ್ಚಿ ಕುಳಿತು ಬಿಟ್ಟರು.
ಕೆಲವು ದಿನಗಳ ಹಿಂದೆ ಅರಾಂಬೋಲ್ ಬೀಚ್ ಅನ್ನು ಸ್ವಚ್ಛ ಗೊಳಿಸಿದ ನಂತರ, ವಿದೇಶಿಯರ ಗುಂಪು ಈ ವಾರ ಪ್ರಸಿದ್ಧ ಸಿಹಿ ನೀರಿನ ಸರೋವರವನ್ನು ಸ್ವಚ್ಛ ಗೊಳಿಸಿತು. ಆದಾಗ್ಯೂ, ಅವರ ಕಾಳಜಿಗೆ ಅಧಿಕಾರಿಗಳಿಂದ ಯಾವುದೇ ನೇರ ನೆರವು ಸಿಗದ ಕಾರಣ, ಅವರು ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಬರೆದು ಸಹಾಯ ಯಾಚಿಸಬೇಕಾಯಿತು.
ಅರಾಂಬೋಲ್ ನ ಸಿಹಿ ನೀರಿನ ಸರೋವರವು, ಅರಾಂಬೋಲ್ ಬೀಚ್ ನ ಸಮೀಪದಲ್ಲಿದೆ. ಇಲ್ಲಿನ ನೀರು ಸಿಹಿಯಾಗಿರುವುದರಿಂದ, ಅನೇಕ ಜನರು ಸ್ನಾನ ಮಾಡಲು ಮತ್ತು ಕಡಲತೀರದ ಮೇಲೆ ವಿಶ್ರಾಂತಿ ಪಡೆಯುವುದಕ್ಕಿಂತ ಸರೋವರದ ಪಕ್ಕದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ . ಆದರೆ ಈ ಸ್ಥಳವು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳಂತಹ ತ್ಯಾಜ್ಯ ವಸ್ತುಗಳ ರಾಶಿಯಾಗಿ ಮಾರ್ಪಟ್ಟಿರುವುದರಿಂದ, ಮಳೆ ಬೀಳುವ ಮುನ್ನ ಸರೋವರವನ್ನು ಸ್ವಚ್ಛಗೊಳಿಸುವ ಅಗತ್ಯವಿತ್ತು.
“ಕ್ಲೀನ್ ಅರಾಂಬೋಲ್” ಬ್ಯಾನರ್ ಅಡಿಯಲ್ಲಿ ರಷ್ಯಾದ ವಿದೇಶಿಯರ ಗುಂಪು ಮೊದಲು ಅರಾಂಬೋಲ್ ಬೀಚ್ ಅನ್ನು ಸ್ವಚ್ಛ ಗೊಳಿಸುವ ಪ್ರಯತ್ನವನ್ನು ನಡೆಸಿತು. ನಂತರ ಸ್ಥಳೀಯ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಾಯದಿಂದ ಸಿಹಿ ನೀರಿನ ಸರೋವರವನ್ನು ಸ್ವಚ್ಛಗೊಳಿಸಿತು.
ಅವರು ಸರೋವರದ ಸ್ವಚ್ಛ ಕಾರ್ಯಕ್ಕೆ ಕೈಜೋಡಿಸಿದಾಗ, ಯಾವುದೇ ವಾಹನವು ಅಲ್ಲಿಗೆ ತಲುಪಲು ಸಾಧ್ಯವಾಗದ ಕಾರಣ ಕಸವನ್ನು ಸರೋವರದಿಂದ ಮುಖ್ಯ ರಸ್ತೆಗೆ ಸಾಗಿಸುವುದು ಕಷ್ಟಕರವಾಗಿತ್ತು. ಮುಖ್ಯ ರಸ್ತೆ ತಲುಪಲು ಸುಮಾರು ಒಂದೂವರೆ ಕಿಲೋಮೀಟರ್ ನಡೆದು ಹೋಗಬೇಕಾಗಿತ್ತು. ಈ ವಿದೇಶಿಯರು ಮೊದಲು ಅರಂಬೋಲ್ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿದಾಗ ಗ್ರಾಮ ಪಂಚಾಯತ್ ಅವರಿಗೆ ಕಸದ ಚೀಲಗಳನ್ನು ಸರಬರಾಜು ಮಾಡಿತು. ನಂತರ ಪ್ರವಾಸೋದ್ಯಮ ಇಲಾಖೆಯು ಕಾರ್ಮಿಕರಿಗೆ ಕಸವನ್ನು ಸ್ವಚ್ಛ ಗೊಳಿಸಲು ಮತ್ತು ಸ್ಥಳಾಂತರಿಸಲು ಸೂಚನೆ ನೀಡಿತು.
ವಿದೇಶಿ ಪ್ರವಾಸಿ ಜೇಡ್ ಮಾತನಾಡಿ “ಸರೋವರದಿಂದ ಕಸವನ್ನು ಮುಖ್ಯ ರಸ್ತೆಗೆ ಬಹಳ ದೂರದಿಂದ ಸಾಗಿಸುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ನಮಗೆ ಗ್ರಾಮ ಪಂಚಾಯಿತಿ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸಹಾಯ ದೊರಕಿತು. ಪಂಚಾಯತ್ ನಮಗೆ ಕಸದ ಚೀಲಗಳನ್ನು ಪೂರೈಸಿತು ಮತ್ತು ಪ್ರವಾಸೋದ್ಯಮ ಇಲಾಖೆ ಕೆಲವು ಕಾರ್ಮಿಕರನ್ನು ಕಳುಹಿಸಿತು ” ಎಂದು ತಿಳಿಸಿದರು
“ನಾನು ಮಾತೃಸ್ವರೂಪಿ ಪ್ರಕೃತಿಯನ್ನು ತುಂಬಾ ಪ್ರೀತಿಸುತ್ತೇನೆ. ಸ್ವಚ್ಛ ಸಾಗರ, ಕಡಲತೀರಗಳು, ಪರ್ವತಗಳು ಮತ್ತು ಮರಗಳು, ಪ್ರತಿಯೊಬ್ಬರೂ ಪ್ರಕೃತಿ ತಾಯಿಯೊಂದಿಗೆ ಇರುವುದನ್ನು ಆನಂದಿಸುತ್ತಾರೆ.ಆದರೆ ಎಲ್ಲರೂ ಅದನ್ನು ನೋಡಿಕೊಳ್ಳುವುದಿಲ್ಲ. ನಾನು ಭಾರತ, ಭಾರತೀಯ ಸಂಸ್ಕೃತಿ, ಆಹಾರ ಮತ್ತು ಜನರನ್ನು ಪ್ರೀತಿಸುತ್ತೇನೆ. ನಾನು ಭಾರತದಲ್ಲಿ ಹುಟ್ಟಿಲ್ಲ, ಆದರೆ ನನಗೆ ಭಾರತೀಯ ಆತ್ಮವಿದೆ ಎಂದು ಅನಿಸುತ್ತದೆ. ನೀವು ಸ್ವಚ್ಛ ಭಾರತದ ಕನಸನ್ನು ಬಯಸಿದರೆ, ನೀವಿರುವ ಸ್ಥಳದಿಂದಲೇ ಅದನ್ನು ಪ್ರಾರಂಭಿಸಬೇಕು. ಹಾಗಾಗಿ ನಾನು ಅರಾಂಬೋಲ್ನಲ್ಲಿ ಯೋಜನೆಗಳನ್ನು ಪ್ರಾರಂಭಿಸಿದೆ ”ಎಂದು ಜೇಡ್ ಹೇಳಿದರು.
ಒಟ್ಟಿನಲ್ಲಿ ಲಾಕ್ ಡೌನ್ ನಿಂದ ಭಾರತದಲ್ಲೇ ಉಳಿದು ಕೊಂಡು ಇವರು ಸಲ್ಲಿಸಿದ ಸೇವೆಗೆ ಧನ್ಯವಾದ ಹೇಳಲೇಬೇಕಿದೆ. ಸ್ವಚ್ಛ ಭಾರತದ ಕನಸು ಕನಸಾಗಿಯೇ ಉಳಿದಿದ್ದು ಇಂತಹ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಸರಕಾರ ಕೈಗೊಳ್ಳಬೇಕು. ಜನ ಸಾಮಾನ್ಯರು ಇದಕ್ಕೆ ಸಹಾಯ ನೀಡಿ, ಸಾಧ್ಯವಾದಷ್ಟು ನಮ್ಮ ಪರಿಸರದ ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.








