ಬೆಂಗಳೂರು: ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲ್ಲಿಲ್ಲ ಎಂಬಂತಾಗಿದೆ ಸದ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪರಿಸ್ಥಿತಿ. ಸರ್ಕಾರ ರಚನೆ ಬಳಿಕ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದು ಕೇವಲ ಸಂಕಷ್ಟವಲ್ಲ ಧರ್ಮ ಸಂಕಷ್ಟ.
ಹೌದು..! ಸಂಪುಟ ವಿಸ್ತರಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಲೇ ಇದೆ. ಇದು ಆಗಾಗ ಪಕ್ಷದ ನಾಯಕರನ್ನು ಕೆಮ್ಮುವಂತೆ ಮಾಡುತ್ತಿದ್ದು, ಈ ಅಸಮಾಧಾನದ ಹೊಗೆ ಬೆಂಕಿಯಾಗಿ ಉರಿಯುವುದೊಂದೇ ಬಾಕಿ ಇದೆ. ಈ ಮಧ್ಯೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸಿರುವ ಬಿಜೆಪಿ ಹೈಕಮಾಂಡ್, ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಖಡಕ್ ಸೂಚನೆ ನೀಡಿದೆ.
ಏನ್ ಆ ಸೂಚನೆ..?
ರಾಜ್ಯ ಬಿಜೆಪಿಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿದ್ದು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಿಎಂ ಅವರಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪಕ್ಷದೊಳಗೆ ಮುನಿಸಿಕೊಂಡಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದೊಕೊಳ್ಳುವ ಕೆಲಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಲಾಗುತ್ತಿಲ್ಲ ಮತ್ತು ಸರ್ಕಾರದಲ್ಲಿ ಏನೇ ಕೆಲಸ ಆಗಬೇಕು ಎಂದರೂ ಬಿ.ವೈ. ವಿಜಯೇಂದ್ರ ಅವರ ಬಳಿಯೇ ಹೋಗಬೇಕು ಎಂಬ ವಿಚಾರಕ್ಕೆ ಬಿಜೆಪಿಯ ಅನೇಕ ಹಿರಿಯ ಶಾಸಕರು ಗರಂ ಆಗಿದ್ದಾರೆ. ಅಲ್ಲದೆ, ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಹ ಈ ಕುರಿತು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಯಡಿಯೂರಪ್ಪ ಶಾಸಕರ ಸಂಧಾನಕ್ಕೆ ಮುಂದಾಗಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಬಿಎಎಸ್‌ವೈ ಸರ್ಕಾರದ ಕಾರ್ಯವೈಖರಿ ಶಾಸಕರಿಗೆ ಇಷ್ಟವಿದೆಯೋ ಅಥವಾ ಏನಾದರೂ ಅಸಮಧಾನವಿದೆಯೋ ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಒನ್ ಟು ಒನ್ ಮಾತುಕತೆ ನಡೆಸಲಿದ್ದಾರೆ.
ವಿಜಯೇಂದ್ರ ವಿರುದ್ಧ ಗರಂ
ಅಭಿವೃದ್ಧಿ ಕಾರ್ಯ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಸಿಎಂ ಪುತ್ರ ವಿಜಯೇಂದ್ರ ಮೂಗು ತೂರಿಸುತ್ತಿರುವುದು ಹಲವಾರು ಮುಖಂಡರ ಮುನಿಸಿಗೆ ಕಾರಣವಾಗಿದೆ. ಈ ವಿಚಾರವನ್ನು ಅತೃಪ್ತರು ಯಡಿಯೂರಪ್ಪನವರ ಗಮನಕ್ಕೂ ತಂದಿದ್ದು, ವಿಜಯೇಂದ್ರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪುತ್ರ ವಿಜಯೇಂದ್ರ ಸೇರಿ ಯಾರೂ ಕೂಡ ಆಡಳಿತದ ವಿಚಾರದಲ್ಲಿ ಮೂಗು ತೂರಿಸದಂತೆ ತಾವು ನೋಡಿಕೊಳ್ಳುವುದಾಗಿ ಸಿಎಂ ಅತೃಪ್ತರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಹೇಗೋ ಸರ್ಕಾರವನ್ನು ಸಾಗಿಸುತ್ತಿರುವ ಯಡಿಯೂರಪ್ಪ ಅವರಿಗೆ ಇದೀಗ ಮತ್ತೊಂದು ಸಂಕಟ ಎದುರಾಗಿದ್ದು, ಇದನ್ನು ಯಾವ ರೀತಿ ನಿರ್ವಹಿಸುತ್ತಾರೋ ಕಾದು ನೋಡಬೇಕಾಗಿದೆ.