ದೆಹಲಿಯಲ್ಲಿ ಉದ್ಯೋಗ ಪೋರ್ಟಲ್ ಬಿಡುಗಡೆ ಮಾಡಿದ ಸಿಎಂ ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ, ಜುಲೈ 28: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಉದ್ಯೋಗ ಪೋರ್ಟಲ್ ಬಿಡುಗಡೆ ಮಾಡಿದ್ದು, ಏಕಕಾಲದಲ್ಲಿ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ಜನರಿಗೆ ದೆಹಲಿಯ ಆರ್ಥಿಕತೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಮನವಿ ಮಾಡಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಇದು ವ್ಯವಹಾರದ ಮೇಲೂ ಕೆಟ್ಟ ಪರಿಣಾಮ ಬೀರಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇ ಪೋರ್ಟಲ್ “ರೋಜ್‌ಗಾರ್ ಬಜಾರ್” ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರುಕಟ್ಟೆಯಂತೆ ಕಾರ್ಯನಿರ್ವಹಿಸುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಅನೇಕ ಜನರಿದ್ದಾರೆ, ಮತ್ತೊಂದೆಡೆ, ಅನೇಕ ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು, ಗುತ್ತಿಗೆದಾರರು ತಮ್ಮ ಕೆಲಸಕ್ಕೆ ಸರಿಯಾದ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರನೆಲ್ಲಾ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿಸಲು ಉದ್ಯೋಗ ಪೋರ್ಟಲ್ ನೆರವಾಗಲಿದೆ ಎಂದರು.
ಲಾಕ್ ಡೌನ್ ಸಮಯದಲ್ಲಿ ದೆಹಲಿಯನ್ನು ತೊರೆದ ಅನೇಕ ವಲಸೆ ಕಾರ್ಮಿಕರು ಈಗ ಮರಳಿ ಬರಲು ಪ್ರಾರಂಭಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು. ದೆಹಲಿ ಕಾರ್ಮಿಕ ಸಚಿವ ಗೋಪಾಲ್ ರೈ ಈ ಉದ್ಯೋಗ ಪೋರ್ಟಲ್‌ನ ಸೇವೆಗಳು ಉಚಿತವಾಗಿರುತ್ತವೆ ಮತ್ತು ಯಾವುದೇ ಅರ್ಜಿದಾರರು ನೋಂದಣಿಗಾಗಿ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದರು. ಕೊರೋನಾ ವೈರಸ್ ಅನ್ನು ನಿಯಂತ್ರಣಕ್ಕೆ ತರಲು ದೆಹಲಿಯು ಯಶಸ್ವಿಯಾಗಿದೆ ಮತ್ತು ಇತರ ರಾಜ್ಯಗಳಂತೆ ಮತ್ತೆ ಲಾಕ್ ಡೌನ್ ಹೇರುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶ ಮತ್ತು ಪ್ರಪಂಚದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಕೋವಿಡ್ -19 ಸೋಂಕಿನಿಂದ ಗುಣಮುಖರಾಗಿ ಹೊರಬರುವ ಜನರ ಶೇಕಡಾವಾರು ಪ್ರಮಾಣವು 88 ಕ್ಕೆ ತಲುಪಿದೆ ಮತ್ತು ಪರೀಕ್ಷೆಯ ನಂತರ, ಕೊರೋನಾ ಸೋಂಕಿಗೆ ಒಳಗಾದ ಜನರ ಪ್ರಮಾಣವು ಜೂನ್ ನಲ್ಲಿದ್ದ 35 ರಿಂದ ಇಳಿದು ಐದು ಮಂದಿಗೆ ಇಳಿದಿದೆ ಎಂದು ಮುಖ್ಯಮಂತ್ರಿ ಹೇಳಿದರು. ಜೂನ್‌ಗೆ ಹೋಲಿಸಿದರೆ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ, ರಾಜಧಾನಿಯ ಕೋವಿಡ್ -19 ಆಸ್ಪತ್ರೆಗಳಲ್ಲಿ 2,850 ರೋಗಿಗಳು ದಾಖಲಾಗಿದ್ದರೆ, 12,500 ಹಾಸಿಗೆಗಳು ಖಾಲಿಯಾಗಿವೆ.