ರಾಜ್ಯದಲ್ಲಿ ಕೊರೊನಾ ಸ್ಫೋಟ : ನಾಳೆ ಸಿಎಂ ಬಿಎಸ್ ವೈ ತುರ್ತುಸಭೆ
ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ. ಅಲ್ಲದೆ 217 ಜನ ಸಾವನ್ನಪ್ಪಿದ್ದಾರೆ. ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರೆದಿದೆ. ಹುಚ್ಚು ಕುದುರೆ ಕೊರೊನಾ ಓಟಕ್ಕೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಸರ್ಕಸ್ ನಡೆಸುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಬೆಡ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಹಿನ್ನೆಲೆ ನಾಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಂಜೆ 4:30 ಕ್ಕೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಆಸ್ಪತ್ರೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕೆಲವು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.









