ಬೆಂಗಳೂರು : ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು 10 ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಲು ಮಣಿಪಾಲ್ ಆಸ್ಪತ್ರೆ ವೈದರ ತಂಡ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಇಂದು ಮಣಿಪಾಲ್ ಆಸ್ಪತ್ರೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಭೇಟಿ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜನಸಾಮಾನ್ಯರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವೈದ್ಯರ ಜತೆ ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ವೈದ್ಯರ ಬಳಿ ಸುದೀರ್ಘವಾದ ಚರ್ಚೆ ಮಾಡಿದ್ದೇನೆ. ಯಡಿಯೂರಪ್ಪ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ರೋಗಲಕ್ಷಣ ರಹಿತ ಸೋಂಕು ಕಾಣಿಸಿಕೊಂಡಿದ್ದು, ವಯಸ್ಸಿನ ಕಾರಣದಿಂದಾಗಿ ನಿಗಾದಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಜ್ವರ ಇದ್ದು ತಪಾಸಣೆ ನಡೆಸುತ್ತಿದ್ದಾರೆ. ಅವರು ಗುಣಮುಖರಾಗಿ ಬರಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಮುಲು ಹೇಳಿದರು.