ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಜನರಲ್ಲಿ ಕ್ಷಮೆ ಕೇಳಬೇಕು : ಬಿಎಸ್ ವೈ
ಬೆಂಗಳೂರು : ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿ ಕರಾಳ ಶಾಸನ ಬರೆದಿರುವ ಕಾಂಗ್ರೆಸ್ ಪಕ್ಷವು ತಪ್ಪು ಒಪ್ಪಿಕೊಂಡು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, 46 ವರ್ಷಗಳ ಹಿಂದೆ ಇದೇ ದಿನ ಅಂದಿನ ಪ್ರಧಾನಿ ಇಂದಿರಾಗಾಂಧಿ ಯಾವುದೇ ಕಾರಣ ಇಲ್ಲದೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.
ಕೇವಲ ತನ್ನ ಖುರ್ಚಿ ಉಳಿವಿಗಾಗಿ ಇಂತಹ ತೀರ್ಮಾನ ಮಾಡಿದ್ದರು. ದೇಶದ ಅನೇಕ ನಾಯಕರು ಜೈಲುವಾಸ ಅನುಭವಿಸಬೇಕಾಯಿತು.
ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಇದನ್ನು ಅಂದು ಹಲವು ಪತ್ರಿಕೆಗಳು ಖಂಡಿಸಿ ಪ್ರತಿಭಟಿಸಿದ್ದವು.
ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ದರು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಜೈಲುವಾಸ ಅನುಭವಿಸಬೇಕಾಯಿತು ಎಂದು ಆಗಿನ ಪರಿಸ್ಥಿತಿಯನ್ನ ನೆನಪಿಸಿಕೊಂಡರು.
ಇನ್ನು ವಾಜಪೇಯಿ, ಅಡ್ವಾಣಿ, ಜಾರ್ಜ್ ಫನಾರ್ಂಡೀಸ್, ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು.
ನಮ್ಮನ್ನು ಮುಗಿಸುವ ಪ್ರಯತ್ನವೂ ನಡೆದಿತ್ತು. ಆನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದರು.
ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ ಮೇಲೆಯೂ ಕಾಣುತ್ತಿದೆ.
ಇದಕ್ಕಾಗಿ ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಆ ಮೂಲಕ ಅವರು ಮಾಡಿದ ಅಕ್ಷಮ್ಯ ಅಪರಾಧವನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ದ ಸಿಎಂ ಕಿಡಿಕಾರಿದರು.