ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾಕಾಟದ ನಡುವೆ ಕೋರ್ಟ್ ಸಂಕಷ್ಟ ಎದುರಾಗಿದೆ. 2019ರಲ್ಲಿ ನಡೆದ ಉಪಚುನಾವಣಾ ಪ್ರಚಾರ ವೇಳೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣದಿಂದಾಗಿ ಗೋಕಾಕ್ ಜೆಎಂಎಫ್ ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

2019 ನವೆಂಬರ್ 23 ರಂದು ಗೋಕಾಕ್ ಮಿನಿಸಮರದಲ್ಲಿ ರಮೇಶ್ ಜಾರಕಿಹೊಳಿ ಅವರ ಪರ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಚಾರ ಮಾಡಿದ್ದರು. ಈ ವೇಳೆ ಸಿಎಂ ತಮ್ಮ ಭಾಷಣದಲ್ಲಿ “ವೀರಶೈವ ಸಮಾಜದ ಮತಗಳು ಆ ಕಡೆ ಈ ಕಡೆ ಆಗದಂತೆ ಇಲ್ಲಿ ಮತ ಚಲಾವಣೆ ಮಾಡಬೇಕು” ಎಂದು ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿ ಸಿಎಂ ಬಿಎಸ್ ವೈ ಜಾತಿ ಆಧಾರದ ಮೇಲೆ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನವೆಂಬರ್ 26ರಂದು ಗೋಕಾಕ್ ನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ ಕೇಸ್ ದಾಖಲಾಗಿತ್ತು.
ಈ ಪ್ರಕರಣದ ಕುರಿತು ತನಿಖಾಧಿಕಾರಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಇದೀಗ ಬಿ ರಿಪೋರ್ಟ್ ತಿರಸ್ಕರಿಸಿರುವ ನ್ಯಾಯಾಲಯ, ಸಮನ್ಸ್ ಜಾರಿ ಮಾಡಿ, ಸೆಪ್ಟೆಂಬರ್ 1ರೊಳಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.









