ರಾಜೀನಾಮೆಗೆ ಸಿದ್ಧ.. `ಹೈ’ ಟೆನ್ಷನ್ ಕೊಟ್ಟ ಸಿಎಂ : ಬಿಎಸ್ ವೈಗೆ ಪರ್ಯಾಯ ನಾಯಕ ಯಾರು..?
ಬೆಂಗಳೂರು : ಸಿಎಂ ಪಟ್ಟದಿಂದ ಕೆಳಗಿಳೀತಾರಾ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ..? ಒಂದು ವೇಳೆ ಬಿಎಸ್ ವೈ ತಮ್ಮ ಸ್ಥಾನಕ್ಕೆ ರಾಜೀನಾಮೇ ನೀಡಿದರೇ ಮುಂದಿನ ಸಿಎಂ ಯಾರು..? ಯಡಿಯೂರಪ್ಪನವರಿಗೆ ಸರಿಸಾಟಿಯಾಗಿರುವ ನಾಯಕರು ರಾಜ್ಯ ಕೇಸರಿ ಪಡೆಯಲ್ಲಿದ್ದಾರಾ..? ಸದ್ಯ ರಾಜ್ಯದಲ್ಲಿ ಉಸಿರಾಡುತ್ತಿರುವ ಪ್ರಶ್ನೆಗಳಿವು. ಇದಕ್ಕೆ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ನಾನು ರಾಜೀನಾಮೆಗೆ ಸಿದ್ಧ ಎಂಬ ಹೇಳಿಕೆ..!!
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಸಿಎಂ ಬದಲಾವಣೆ ಮಾತುಗಳು ಕೇಳಿಬರುತ್ತಲೇ ಇವೆ. ಕೊರೊನಾ ಇಲ್ಲದಿದ್ದರೇ ಈಗಾಗಲೇ ಸಿಎಂ ಬದಲಾವಣೆ ಆಗುತ್ತಿತ್ತು ಎಂದು ಕೂಡ ಹೇಳಲಾಗುತ್ತಿದೆ. ಈ ಗುಸು ಗುಸು ಕೆಲ ದಿನಗಳಿಂದ ತುಸು ಜೋರಾಗಿಯೇ ಸದ್ದು ಮಾಡುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತ ಬೆಳವಣಿಗೆಗಳು ಕೂಡ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿವೆ ಅನ್ನೋದು ಚಿದಂಬರ ರಹಸ್ಯವೇಲ್ಲ. ಆದರೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದ್ದ ಸಿಎಂ ಬದಲಾವಣೆ ವಿಚಾರ ಇದೀಗ ಸಾಕಷ್ಟು ಚರ್ಚೆ ಮತ್ತು ಕುತೂಹಲಗಳಿಗೆ ಕಾರಣವಾಗಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದ್ರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ ಅಲ್ಲಿಯವರೆಗೂ ನಾನು ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇದೆ.
ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ, ಅದನ್ನು ಶಕ್ತಮೀರಿ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಉಳಿದಿದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದ್ದರಿಂದ ನಾನು ಯಾವುದೇ ಗೊಂದಲದಲ್ಲಿ ಇಲ್ಲ ಎಂದು ಹೇಳುವ ಮೂಲಕ ಸಿಎಂ ಕುರ್ಚಿಯಿಂದ ಕೆಳಗಿಳಿಯಲು ನನಗೆ ಯಾವುದೇ ಅಭ್ಯಂತ್ರವಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಸಿಎಂ ಬಿಎಸ್ ವೈ ಸಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರ ಈ ಹೇಳಿಕೆಯನ್ನ ರಾಜಕೀಯ ಪಂಡಿತರು ನಾನಾ ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಈ ನಡುವೆ ನನ್ನ ಮುಟ್ಟಿ ನೋಡಿ..! ಎಂದು ಒಂದೇ ಕಲ್ಲಿನಲ್ಲಿ ಬಿಎಸ್ ವೈ ಎರಡು ಹಕ್ಕಿಯನ್ನ ಹೊಡೆದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ರೆ ಪದೆ ಪದೇ ಸಿಎಂ ಬದಲಾವಣೆ ವಿಚಾರ ತರುವುದರಿಂದ ಬಿಎಸ್ ವೈ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ ಎನ್ನಲಾಗಿದೆ. ಇದಕ್ಕೆ ಇದೀಗ ಬಿಎಸ್ ವೈ ಚೆಕ್ ಮೇಟ್ ಇಟ್ಟಿದ್ದು, ನಾನು ರಾಜೀನಾಮೇ ನೀಡಲು ಸಿದ್ಧ, ಆದ್ರೆ ಅದನ್ನ ಹೈಕಮಾಂಡ್ ಹೇಳಲಿ ಎನ್ನುವ ಮೂಲಕ ತಮ್ಮ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ. ಜೊತೆಗೆ ಹೈಕಮಾಂಡ್ ಗೂ ಕೂಡ ನಾನು ಸಿಎಂ ಕುರ್ಚಿಗೆ ಅಂಟಿಕೊಂಡಿಲ್ಲ, ನೀವು ರಾಜೀನಾಮೆ ನೀಡಿ ಎಂದು ಹೇಳಿ ನೋಡೋಣ ಅನ್ನೋ ರೀತಿಯಲ್ಲಿ ಹೇಳಿಕೆ ನೀಡಿದಂತಿದೆ.
ಯಾಕೆಂದ್ರೆ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿಯ ಅನಭಿಶಕ್ತ ದೊರೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಯಾರು ಏನೇ ಹೇಳಿದರೂ ಎಷ್ಟೇ ತಪ್ಪರ್ಲಾಗ ಹಾಕಿದ್ರೂ ಯಡಿಯೂರಪ್ಪನವರನ್ನ ಮೀರಿ ರಾಜ್ಯ ಬಿಜೆಪಿಯಲ್ಲಿ ಏನು ನಡೆಯೋದಿಲ್ಲ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಸಿಎಂ ಬದಲಾವಣೆ ಕೂಡ ಕಷ್ಟ ಸಾಧ್ಯ. ಹೀಗಿದ್ದಾಗ ಬಿಜೆಪಿ ಬಿಗ್ ಬಾಸ್ ಗಳಾದರೂ ಹೇಗೆ ಯಡಿಯೂರಪ್ಪನವರ ರಾಜೀನಾಮೆ ಕೇಳ್ತಾರೆ ಅಲ್ವಾ..?
ಒಂದು ವೇಳೆ ಯಡಿಯೂರಪ್ಪ ಒತ್ತಡಕ್ಕೆ ಮಣಿದೋ..? ಅಥವಾ ಪಕ್ಷಕ್ಕಾಗಿಯೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಮುಂದಿನ ಸಿಎಂ ಯಾರು..? ಅನ್ನೋ ಪ್ರಶ್ನೆಗೆ ಎದ್ದುಯುಬ್ಬಿಸಿ ಇವರೇ ಮುಂದಿನ ಸಿಎಂ ಅಂತ ಹೇಳುವ ನಾಯಕರೂ ಬಿಜೆಪಿಯಲ್ಲಿಲ್ಲ. ಯಾಕಂದ್ರೆ ಸದ್ಯ ಬಿಜೆಪಿಯಲ್ಲಿರುವ ಅನೇಕರು ಯಡಿಯೂರಪ್ಪ ಎಂಬ ಆಲದಮರದ ನೆರಳಿನಲ್ಲಿ ಬೆಳೆದವರೇ. ಇವರಿಗೆ ಯಡಿಯೂರಪ್ಪ ಮಾತು ವೇದ ವಾಕ್ಯವಾಗಿರುತ್ತೆ. ಆದರೂ ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರಾಗಬಹುದು ಎಂಬ ಪ್ರಶ್ನೆ.. ತಕ್ಷಣಕ್ಕೆ ಎಲ್ಲರಲ್ಲೂ ಕೇಳಿಬರುತ್ತಿರುವ ಹೆಸರು ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಶಿ, ಉದಾಸಿ, ಬಸವರಾಜ್ ಬೊಮ್ಮಾಯಿ. ವಕ್ಕಲಿಗ ಸಮುದಾಯದ ಆರ್.ಅಶೋಕ್, ಅಶ್ವತ್ ನಾರಾಯಣ್. ಆರ್ ಎಸ್ ಎಸ್ ನೆರಳಿನಿಂದ ಬಿ.ಎಲ್ ಸಂತೋಷ್, ನಳಿನ್ ಕುಮಾರ್ ಕಟೀಲ್, ಸಿ. ಟಿ ರವಿ ಹೆಸರು ಕೂಡ ಕೇಳಿಬರುತ್ತಿದೆ.
ಮುಖ್ಯವಾಗಿ ಮುರುಗೇಶ್ ನಿರಾಣಿ ಅವರನ್ನ ಸಿಎಂ ಮಾಡಬೇಕು ಅನ್ನೋ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆಯಂತೆ. ಅದರಲ್ಲೂ ನಿರಾಣಿ ಉತ್ತರ ಕರ್ನಾಟಕದವಾಗಿದ್ದು, ಅವರಿಗೆ ಸಿಎಂ ಸ್ಥಾನ ನೀಡಿದ್ರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತೆ. ಜೊತೆಗೆ ಲಿಂಗಾಯತ ಮತಗಳನ್ನು ರಕ್ಷಿಸಿಕೊಳ್ಳಬಹುದು ಅನ್ನೋ ಸಣ್ಣ ಲೆಕ್ಕಾಚಾರವೂ ಇದರಲ್ಲಿದೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಮೂಲೆಗುಂಪಾದರೇ ಪಕ್ಷದ ಕಥೆ ಏನು..?
ಇದು ಸಾಮಾನ್ಯವಾಗಿ ರಾಜ್ಯ ರಾಜಕಾರಣವನ್ನ ಗಮನಿಸಿರುವ ಹಾಗೂ ಗಮನಿಸುತ್ತಿರುವ ಸಾಕಷ್ಟು ಮಂದಿಯ ಪ್ರಶ್ನೆ ಆಗಿರಬಹುದು. ಯಾಕೆಂದ್ರೆ ರಾಜ್ಯದ ಮಟ್ಟಿಗೆ ಬಿ.ಎಸ್.ಯಡಿಯೂರಪ್ಪ ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಯಡಿಯೂರಪ್ಪ. ರಾಜ್ಯ ಕೇಸರಿ ಪಡೆ ಪಾಲಿಗೆ ಬಿಎಸ್ ವೈ ಮಾಸ್ ಲೀಡರ್. ಏಕಾಂಗಿಯಾಗಿ ಹೋರಾಡುವ ಛಲದಂಕಮಲ್ಲ, ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಚಾಣಾಕ್ಷ್ಯತನ ಯಡಿಯೂರಪ್ಪನವರಲ್ಲಿದೆ. ಈಗಿರುವಾಗ ಯಡಿಯೂರಪ್ಪನವರನ್ನ ಮೂಲೆ ಗುಂಪು ಮಾಡಿ ಆಟವಾಡುತ್ತೇವೆ ಅನ್ನೋದು ಕಷ್ಟಸಾಧ್ಯವೇ. ರಾಜ್ಯ ಬಿಜೆಪಿಗೆ ಈಗಾಗಲೇ ಇದರ ಅನುಭವ ಕೂಡ ಆಗಿದೆ. ಹೀಗಾಗಿ ಸದ್ಯಕ್ಕೆ ಯಡಿಯೂರಪ್ಪನವರನ್ನ ಕಡೆಗಣಿಸಿ ಹೈಕಮಾಂಡ್ ಯಾವುದೇ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.