ಮಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಎಲ್ಲ ಜಾತಿ, ಜನಾಂಗ, ಧರ್ಮದವರಿಗೂ ಅನುದಾನ ನೀಡುವ ಮೂಲಕ, ಸಮತೋಲನ, ಸೌಹಾರ್ದತೆ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ 10 ಕೋಟಿ ಅನುದಾನ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಟಿಎಸ್‌ಪಿ ಅಡಿ 26,930 ಕೋಟಿ ರೂ. ಅನುದಾನ ನೀಡಲಾಗಿದೆ.
ಇದ್ದಲ್ಲದೆ ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 78 ಕೋಟಿ ರೂ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ.ಗಳ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.ಗಳನ್ನು, ಆರ್ಯ ವೈಶ್ಯ ಅಭಿವೃದ್ದಿ ನಿಗಮಕ್ಕೆ 10 ಕೋಟಿ ರೂ.ಗಳನ್ನು, ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ 20 ಕೋಟಿಗಳನ್ನು ಮೀಸಲಿಡಲಾಗಿದೆ.