ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಹೊರಟ ಇಬ್ರಾಹಿಂ – Saaksha Tv
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜೀನಾಮೆ ಕೊಡುತ್ತೇನೆ ಎಂದು ಸಿಎಂ ಇಬ್ರಾಹಿಂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಳುಸುತ್ತಿದ್ದೇನೆ. ವಿಧಾನ ಪರಿಷತ್ ಸ್ಥಾನಕ್ಕೆ ಸಹ ಇಂದೇ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕಳುಹಿಸುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು. ಕಾಂಗ್ರೆಸ್‌ನ ಕಾರ್ಯಕರ್ತರಿಗೂ ಧನ್ಯವಾದ. ಸ್ವಾಭಿಮಾನ ಹಾಗೂ ರಾಜ್ಯದ ಹಿತ ದೃಷ್ಡಿಯಿಂದ ಈ ರಾಜೀನಾಮೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಂಡು ಇರಲು ಸಾಧ್ಯವಿಲ್ಲ. 1994ರಲ್ಲಿ ಆದ ರಾಜಕೀಯ ಸ್ಥಿತಿ 2022ರಲ್ಲೂ ಆಗಲಿದೆ. ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಇಬ್ರಾಹಿಂ ಅಭಿಪ್ರಾಯ ಪಟ್ಟರು.
ಇವತ್ತು ಅಥವಾ ನಾಳೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಂ ಹೆಚ್ ಡಿ ಕುಮಾರಸ್ವಾಮಿ ಜೊತೆ ಕುಳಿತು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಗೊತ್ತಿಲ್ಲದ ದಾರಿಯಲ್ಲಿ ಹೋಗುವುದಕ್ಕಿಂತ ಗೊತ್ತಿರುವ ದಾರಿಯಲ್ಲಿ ಹೋಗುವುದು ಒಳಿತು ಎಂದು ತಿಳಿಸಿದರು.
ಜೆಡಿಎಸ್ ಸೇರಬೇಕು ಎಂಬುದು ನನ್ನ ಇಚ್ಛೆ. ಅವರ ಜೊತೆ ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮೊದಲೇ ಹೇಳಿದ್ದೆ. ಪಂಜಾಬ್‌ನಲ್ಲಿ ಆಗಿರುವುದು ಕರ್ನಾಟಕದಲ್ಲಿಯೂ ಆಗಲಿದೆ. ಇದರ ವಿರುದ್ಧ ಹೋರಾಟ ಮಣ್ಣಿನ ಮಕ್ಕಳಿಗೆ ಮಾತ್ರ ಸಾಧ್ಯ. ನಾನು ಹೆಜ್ಜೆ ಇಟ್ಟಲ್ಲಿ ದೇವರು ನನ್ನ ಕೈಬಿಟ್ಟಿಲ್ಲ. ಜನರ ನಾಡಿ ಮಿಡಿತ ನನಗೆ ಗೊತ್ತಿದೆ. ಜೆಡಿಎಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಭವಿಷ್ಯ ನುಡಿದರು.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ವಿಫಲವಾಗಿದ್ದು, ಕಾಂಗ್ರೆಸ್ ತೊರೆಯುವುದು ಅಧಿಕೃತವಾಗಿದೆ. ಈ ಹಿನ್ನೆಲೆಯಲ್ಲಿ ತವರು ಪಕ್ಷವಾದ ಜೆಡಿಎಸ್ ವಾಪಸಾಗುವುದು ಬಹುತೇಕ ಖಚಿತವಾಗಿದೆ.









