ಬೆಂಗಳೂರು: ಕನ್ನಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳ ಒಳಗೆ ಕೆಪಿಎಸ್ ಸಿ (KPSC) ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ಪರೀಕ್ಷೆಯನ್ನು ಮರಳಿ ನಡೆಸುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದಾರೆ.
ಕನ್ನಡ ಭಾಷಾಂತರದಲ್ಲಿ ಹಲವು ಲೋಪಗಳು ಕಂಡು ಬಂದಿವೆ. ಇದರಿಂದ ಕನ್ನಡಿಗರಿಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಅಲ್ಲದೇ, ಮರು ಪರೀಕ್ಷೆ ನಡೆಸಬೇಕೆಂದು ಕೋರಿದ್ದರು. ಹೀಗಾಗಿ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೂಲಕ ಸೂಚಿಸಿರುವ ಸಿಎಂ, ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ (Kannada Translation) ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.
ಅಲ್ಲದೇ, ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.








