ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಆಗುತ್ತೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿದೆ. ಈ ಕುರಿತು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಹೊರವಲಯದ ದಾಸರಹಳ್ಳಿಯ ಮೇದರಹಳ್ಳಿಯಲ್ಲಿ ದಿನಸಿ ಪದಾರ್ಥಗಳ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆ ಮಾಡಿಲ್ಲ, ಕೇಂದ್ರ ಸರ್ಕಾರ ಮತ್ತು ಡಬ್ಲ್ಯೂಎಚ್ ಒ ತೀರ್ಮಾನದ ಮೇಲೆ ರಾಜ್ಯದ ತೀರ್ಮಾನ ಅವಲಂಬಿತವಾಗಿದೆ. ಹೆಚ್ಚು ರೋಗ ಹರಡುತ್ತಿರುವ ಕಡೆ ಲಾಕ್ ಡೌನ್ ಮಾಡಿದರೆ ತಪ್ಪಾಗಲಾರದು, ಈ ವಿಚಾರದಲ್ಲಿ ಪ್ರಧಾನ ಮಂತ್ರಿ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಇದೇ ವೇಳೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಅದೃಷ್ಟವಶಾತ್ ನಮ್ಮ ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ ಎಂದ ವಿಶ್ವನಾಥ್, ದೆಹಲಿ, ಮುಂಬೈನಲ್ಲಿ ನಿಯಂತ್ರಣ ತಪ್ಪಿರುವ ಕಡೆ ಲಾಕ್ ಡೌನ್ ಮಾಡಿದರೆ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನು ದಿನಸಿ ಪದಾರ್ಥಗಳ ಕಿಟ್ ವಿತರಣೆ ವೇಳೆ ದಾಸರಹಳ್ಳಿಯ ಮಾಜಿ ಶಾಸಕ ಎಸ್. ಮುನಿರಾಜು, ಶ್ರೀ ಸಾಯಿ ಫೌಂಡೇಶನ್ ಮಾಲೀಕ ಬಿ.ಸುರೇಶ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.








