ಬೆಂಗಳೂರು: ದೇಶಕ್ಕೆ ಕೊರೊನಾ ಸೋಂಕು ಬಂದಿದ್ದೇ ಬಂದಿದ್ದು ಇಡೀ ದೇಶವನ್ನೇ ಸ್ತಬ್ಧ ಮಾಡಿಬಿಟ್ಟಿದೆ. ಸೋಂಕು ಹರಡುವುದನ್ನ ತಡೆಯೋಕೆ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿದ್ದ ಬಾರ್ ಮತ್ತು ವೈನ್ ಶಾಪ್ ಗಳಿಗೆ ಬೀಗ ಹಾಕಲಾಗಿದೆ. ಇದು ಮದ್ಯ ಪ್ರಿಯರಿಗೆ ಬಹಳ ನಿರಾಸೆಯನ್ನುಂಟು ಮಾಡಿದೆ. ಎಣ್ಣೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿ ಕೆಲವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ವರದಿಯಾಗಿವೆ.
ಈ ಹಿನ್ನೆಲೆ ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯ ಮುಕ್ತಾಯದಲ್ಲಿ ಪತ್ರಕರ್ತರು ಬಿಎಸ್ ವೈ ಅವರನ್ನು ಮದ್ಯದ ಕುರಿತಾಗಿ ಪ್ರಶ್ನೆ ಕೇಳಿದ್ರು. ಸಿಎಂ ಅವರಿಗೆ ಪತ್ರಕರ್ತರು ಕೇಳಿದ ಪ್ರಶ್ನೆ ಅರ್ಥವಾಗದೇ ಇದ್ದಾಗ ಅವರ ಪಕ್ಕದಲ್ಲೇ ಇದ್ದ ಸಚಿವ ಆರ್.ಅಶೋಕ್ ಅವರು ಕೈ ಸನ್ನೆ ಮೂಲಕ ಎಣ್ಣೆ ಎಣ್ಣೆ ಎಂದು ತೋರಿಸಿದ್ರು. ಆಗ ನಗುತ್ತಾ ಪ್ರತಿಕ್ರಿಯಿಸಿದ ಸಿಎಂ ‘ಎಣ್ಣೆ ಬೇಕು ಅನ್ನುವವರು ಏಪ್ರಿಲ್ 14ರವರೆಗೆ ಕಾಯಬೇಕು.’ ಎಂದು ಹೇಳಿ ನಗುತ್ತಲೇ ಅಲ್ಲಿಂದ ನಿರ್ಗಮಿಸಿದ್ದಾರೆ.
ಬಳಿಕ ಸಚಿವ ಆರ್. ಅಶೋಕ್ ಅವರು ‘ಊಟ ನಮ್ದು ಅಷ್ಟೇ, ಎಣ್ಣೆ ಮಾತ್ರ ಇಲ್ಲ’ ಎಂದು ಕನ್ನಡ ಚಿತ್ರದ ಹಾಡೊಂದರ ಟೋನ್ ನಲ್ಲಿ ಹೇಳುತ್ತಾರೆ. ಇಷ್ಟಾಗುವಷ್ಟರಲ್ಲೇ ಅಲ್ಲಿದ್ದ ಬಿಗುವಿನ ವಾತಾವರಣ ದೂರವಾಗಿ ಎಲ್ಲರು ನಗುತ್ತಾರೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.








