ರಾಜ್ಯದ ರೈತರಿಗೆ ಮತ್ತೊಂದು ಭರ್ಜರಿ ಗುಡ್ನ್ಯೂಸ್ ನೀಡಿರುವ ಸಿಎಂ ಸಿದ್ದರಾಮಯ್ಯ, ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ಹಣ ಶೀಘ್ರದಲ್ಲೇ ಖಾತೆಗೆ ಜಮಾ ಆಗಲಿದೆ ಎಂದು ಘೋಷಿಸಿದ್ದಾರೆ. ಜಂಟಿ ಸಮೀಕ್ಷೆ ಪೂರ್ಣಗೊಂಡ ನಂತರವೇ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಕೃಷಿ, ತೋಟಗಾರಿಕೆ ಮತ್ತು ನೀರಾವರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ, ರೈತರಿಗೆ ನೀರಿನ ನಿರ್ವಹಣೆ, ವೈಜ್ಞಾನಿಕ ಬಿತ್ತನೆ ವಿಧಾನಗಳು, ಇಳುವರಿ ಹೆಚ್ಚಿಸುವ ಹೊಸ ತಳಿಗಳ ಕುರಿತು ವಿವರವಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಇದೇ ವೇಳೆ, ಮೂರು ಇಲಾಖೆಗಳ ಅಧಿಕಾರಿಗಳು ನಿಯಮಿತವಾಗಿ ಜಂಟಿಯಾಗಿ ಸಭೆ ನಡೆಸಿ, ಪ್ರದೇಶವಾರು ಬೆಳೆಹಾನಿ, ನೀರಾವರಿ ಯೋಜನೆ, ಬೆಳೆ ಪರ್ಯಾಯಗಳು ಮುಂತಾದ ವಿಚಾರದಲ್ಲಿ ರೈತರಿಗೆ ನೆರವಾಗುವಂತೆ ನಿರ್ದೇಶನ ನೀಡಿದ್ದಾರೆ.
ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಈ ಪರಿಹಾರ ಘೋಷಣೆ ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ ಎಂದು ರಾಜ್ಯದ ವಿವಿಧ ಭಾಗಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.








