ನಗರದಲ್ಲಿ ನಡೆದ ದಿಶಾ ಸಮಿತಿಯ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರವು ರಾಜ್ಯಕ್ಕೆ ನೀಡಬೇಕಾದ ಅನೇಕ ಅನುದಾನಗಳನ್ನು ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ ಎಂಬ ಆರೋಪವನ್ನು ಅವರು ಮುಂದಿಟ್ಟಿದ್ದಾರೆ.
ಪಿಂಚಣಿ & ಯೋಜನೆಗಳ ಹಣ ಬಾಕಿ
ಸಿಎಂ ಸಿದ್ದರಾಮಯ್ಯ ತಿಳಿಸಿದಂತೆ, ಎರಡು ವರ್ಷಗಳಿಂದ ರಾಜ್ಯದ ಹಿರಿಯ ನಾಗರಿಕರಿಗೆ ನೀಡಬೇಕಾದ ಕೇಂದ್ರ ಪಿಂಚಣಿಯನ್ನು ಬಿಡುಗಡೆ ಮಾಡಿಲ್ಲ. ಇದರ ಜೊತೆಗೆ, ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೂಡ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
15ನೇ ಹಣಕಾಸು ಆಯೋಗದ ಸ್ಪೆಷಲ್ ಗ್ರಾಂಟ್ ಬಾಕಿ
15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನವನ್ನು ನೀಡಬೇಕಾಗಿತ್ತು. ಇದರ ಜೊತೆಗೆ, ಬೆಂಗಳೂರು ನಗರ ಅಭಿವೃದ್ಧಿಗೆ ಅತಿ ಮುಖ್ಯವಾಗಿರುವ ಕೆರೆ ಅಭಿವೃದ್ಧಿ ಯೋಜನೆ ಮತ್ತು ಫೆರಿಫೆರಲ್ ರಿಂಗ್ ರಸ್ತೆ (PRR) ಕಾಮಗಾರಿಗೆ ನೀಡಬೇಕಾದ ಹಣ ಸೇರಿ ಒಟ್ಟು ₹11,495 ಕೋಟಿ ಅನುದಾನ ರಾಜ್ಯಕ್ಕೆ ಬರಬೇಕಿತ್ತು. ಆದರೆ ಇದುವರೆಗೆ ಏನೂ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ
ರಾಜ್ಯಕ್ಕೆ ಅನ್ಯಾಯವಾಗುತ್ತಿದೆ
ಕೇಂದ್ರ ಸರ್ಕಾರ ರಾಜ್ಯದ ಹಕ್ಕಿನ ಹಣವನ್ನು ನೀಡದೇ, ಅಭಿವೃದ್ಧಿಗೆ ಅಡೆತಡೆಯಾಗುತ್ತಿದೆ. ಇದು ಸರ್ವಥಾ ಅನ್ಯಾಯ. ನಾವು ಕೇಂದ್ರವನ್ನು ಎಷ್ಟೋ ಬಾರಿ ಮನವಿ ಮಾಡಿದ್ದೇವೆ, ಆದರೆ ಸ್ಪಂದನೆ ಇಲ್ಲ, ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಬಾರಿಯ ದಿಶಾ ಸಮಿತಿ ಸಭೆಯಲ್ಲಿ ಸಾಕಷ್ಟು ಯೋಜನೆಗಳ ಪ್ರಗತಿ ಪರಿಶೀಲನೆಯಾಗಿದ್ದು, ಅನುದಾನ ಕೊರತೆಯಿಂದಾಗಿ ಅನೇಕ ಅಭಿವೃದ್ಧಿ ಕಾಮಗಾರಿ ತಕ್ಷಣ ಪ್ರಾರಂಭವಾಗಲಾರದು ಎಂಬ ತಕರಾರನ್ನು ಸಚಿವರು ಮತ್ತು ಅಧಿಕಾರಿಗಳು ಉಲ್ಲೇಖಿಸಿದರು.
ಈ ಪರಿಸ್ಥಿತಿಯಲ್ಲಿ, ರಾಜ್ಯದ ಬೆಳವಣಿಗೆಗೆ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದತ್ತ ಸಿಎಂ ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದಾರೆ.








