ವೀಕೆಂಡ್ ಕರ್ಪ್ಯೂ ಬಗ್ಗೆ ಸಿಎಂ ಮಹತ್ವದ ಹೇಳಿಕೆ Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆ ಮತ್ತು ಜಾರಿಗೊಳಿಸಲಾದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಕರೆದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಇದೆ. ವೀಕೆಂಡ್ ಕರ್ಫ್ಯೂ ಕುರಿತು ಸಚಿವರು, ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ವಲಯದವರು ಸಲಹೆ ನೀಡಿದ್ದಾರೆ. ಅವುಗಳನ್ನು ಪರಾಮರ್ಶಿಸಿ ಮತ್ತು ಕೊರೊನಾದ ಸ್ಥಿತಿಗತಿಗಳನ್ನು ತಿಳಿದುಕೊಂಡು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕಳೆದೆರಡು ಕೊರೊನಾ ಅಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಈ ಸಮಯದಲ್ಲಿ ಜನರು ಜೀವನ ನಡೆಸಲು ಸಾಕಷ್ಟು ತೊಂದರೆ ಅನುಭವಿಸಿದ್ದು, ಈಗ ಚೇತರಿಕೆಗೊಳ್ಳುತ್ತಿದ್ದರು. ಆದರೆ ಈಗ ಮೂರನೆ ಅಲೆ ಮತ್ತೆ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಈ ಮೂರನೇ ಅಲೆಯನ್ನು ನಿಯಂತ್ರಿಸಲು ಸರಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಇದರಿಂದ ಹೊಟೇಲ್ ಉದ್ಯಮದಾರರಿಗೆ, ಚಿತ್ರಮಂದಿರಗಳಿಗೆ ಮತ್ತು ವ್ಯಾಪರಸ್ತರಿಗೆ ಅಪಾರವಾದ ನಷ್ಟವಾಗಿದ್ದು, ಇದನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಹಾಗೇ ಈ ಕಠಿಣ ನಿಯಮಗಳ ಕುರಿತು ಬಿಜೆಪಿಯ ಸಂಸದರು ವಿರೋಧವಾಗಿ ಮಾತನಾಡಿರುವುದು ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿಯಮಗಳನ್ನು ಸಡಲಿಕೆ ಮಾಡುತ್ತಾರಾ ಅಥವಾ ಆಯಾ ಜಿಲ್ಲೆಗಳ ಕೊರೊನಾ ಸ್ಥಿತಿಗತಿಗಳ ಕುರಿತು ನಿಯಮಗಳನ್ನು ಜಾರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡುತ್ತಾರಾ ಎಂದು ಜನರಲ್ಲಿ ಪ್ರಶ್ನೆ ಮೂಡುತ್ತಿದೆ.