ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸದ ಬಳಿ ವಾಂಟೆಡ್ ಕ್ರಿಮಿನಲ್ ನ್ನು ಬಂಧಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು ಬಂಧಿತನಿಂದ ದೇಶಿ ನಿರ್ಮಿತ ಪಿಸ್ತೂಲ್, ಏಳು ಜೀವಂತ ಗುಂಡುಗಳನ್ನು ಹಾಗೂ ಸಿಡಿಮದ್ದುಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈಯ ಬಾಂದ್ರಾ ಪೂರ್ವದಲ್ಲಿರುವ ಉದ್ಧವ್ ಠಾಕ್ರೆ ನಿವಾಸದ ಹೊರಗೆ ಮುಂಬೈ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಕ್ರಿಮಿನಲ್ ಇರ್ಶಾದ್ ಖಾನ್ ಎಂದು ಗುರುತಿಸಲಾಗಿದೆ. ಇರ್ಶಾದ್ ಖಾನ್ ವಿರುದ್ಧ ಮುಂಬೈ, ಥಾಣೆ ಮತ್ತು ಗುಜರಾತ್ ಗಳಲ್ಲಿ ಕಳ್ಳತನ, ದರೋಡೆ, ಕೊಲೆ ಸೇರಿ ಹತ್ತು ಹಲವು ಪ್ರಕರಣಗಳು ದಾಖಲಾಗಿದೆ.
ಉದ್ಧವ್ ಠಾಕ್ರೆ ಅವರ ನಿವಾಸದ ಸುತ್ತಮುತ್ತ ತನ್ನ ಸಹಚರರ ಜೊತೆ ಸೇರಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇರ್ಶಾದ್ ನ ಚಲನವಲನ ಬಗ್ಗೆ ಖಚಿತ ಮಾಹಿತಿ ಪಡೆದ ಬಾಂದ್ರಾ ಪೊಲೀಸರು ಇಂದು ಮುಂಜಾನೆ ಇರ್ಶಾದ್ ನಿವಾಸದ ಮೇಲೆ ದಾಳಿ ಮಾಡಿ ದರೋಡೆಗೆ ಬಳಸುತ್ತಿದ್ದ ಮಾರಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.








