ಸಿಎಂ ದೆಹಲಿ ಭೇಟಿ : ರಾಜ್ಯದಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ..?
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಭೇಟಿ ಭಾರಿ ಕುತೂಹಲಗಳಿಗೆ ಕಾರಣವಾಗಿದೆ. ಸಿಎಂ ಬಿಎಸ್ ವೈ ದೆಹಲಿಯತ್ತ ಮುಖಮಾಡುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿದರಿವೆ. ಅಲ್ಲದೆ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಯಾವುದಾದರೂ ಬದಲಾವಣೆಗೆ ಮುನ್ಸೂಚನೆ ನೀಡುತ್ತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.
ಯಾಕಂದ್ರೆ ರಾಜ್ಯದಲ್ಲಿ ಕೆಲದಿನಗಳಿಂದ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಲೇ ಇದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಈ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ರೂ ಕೂಡ, ಸಿಎಂ ಬದಲಾವಣೆ ವಿಷಯ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಬಿಜೆಪಿಯ ಕೆಲ ನಾಯಕರು ದೆಹಲಿಗೆ ಭೇಟಿ ನೀಡಿದ್ದು, ಕೂಡ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಅದರಲ್ಲೂ ಮುಖ್ಯವಾಗಿ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬೆನ್ನಲ್ಲೆ ರಾಜ್ಯದಲ್ಲೂ ಸಂಪು ಪುನರ್ ರಚನೆ ಆಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಸಚಿವರು ಹೇಳಿಕೆಗಳನ್ನು ನೀಡಿದ್ದರು. ಮೂಲಗಳ ಪ್ರಕಾರ ರಾಜ್ಯ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಸಿಎಂ, ಇಂದು ನಾನು ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಾಳೆ ವಾಪಸ್ ಬರುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ಆಪ್ತ ಲೆಹರ್ ಸಿಂಗ್ ಹಾಗೂ ಅಧಿಕಾರಿ ವಲಯದಿಂದ ಶಶಿಧರ್, ಗಿರೀಶ್ ಹೊಸೂರ್, ರಾಘವೇಂದ್ರ, ಸುಧೀರ್ ಕುಮಾರ್ ಸಿಂಗ್, ಕೆ. ಕಪ್ಫೋ ಪ್ರಯಾಣಿಸಿದ್ದಾರೆ.









