ಬೆಂಗಳೂರು, ಮೇ 26 : ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್ ಚುನಾವಣೆ ಮುಳ್ಳಾಗಿ ಚುಚ್ಚುತ್ತಿದೆ. ಲಾಕ್ ಡೌನ್ ಮಧ್ಯೆ ಮೇ ಮತ್ತು ಜೂನ್ ತಿಂಗಳಾಂತ್ಯಕ್ಕೆ 16 ವಿಧಾನ ಪರಿಷತ್ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. 16 ಸ್ಥಾನಗಳಿಗೆ ಜೂನ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಎಂಎಲ್ ಸಿ ಆಕಾಂಕ್ಷಿಗಳ ಲಾಬಿ ಶುರುವಾಗಿದೆ.
ಅದರಲ್ಲೂ ರಾಜ್ಯ ಬಿಜೆಪಿಯಲ್ಲಂತೂ ಆಕಾಂಕ್ಷಿಗಳ ಪಟ್ಟಿ ಸ್ವಲ್ಪ ದೊಡ್ಡದಾಗಿಯೇ ಇದೆ. ಆಕಾಂಕ್ಷಿಗಳ ಪರ ಪಕ್ಷದ ಹಿರಿಯ ನಾಯಕರು ಭಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಎಂಎಲ್ ಸಿ ರೇಸ್ ನಲ್ಲಿ ಮರಿ ರಾಜಾಹುಲಿ ಕಾಣಿಸಿಕೊಂಡಿದೆ. ಇದು ಸಿ.ಪಿ ಯೋಗೇಶ್ವರ್ ಗೆ ಮುಳುವಾಗುವ ಸಾಧ್ಯತೆಗಳಿವೆ.
ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿಯನ್ನು ಅಧಿಕಾರಿ ತಂದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಎಂಎಲ್ ಸಿಗಳಾಗುವುದು ಪಕ್ಕಾ ಎನ್ನಲಾಗಿದೆ. ಆದ್ರೆ ಸಿ.ಪಿ ಯೋಗೇಶ್ವರ್ ಅವರ ಸ್ಥಿತಿಯೇ ಡೋಲಾಯಮಾನವಾಗಿದೆ. ಇದಕ್ಕೆ ಕಾರಣ ಸಿಎಂ ಪುತ್ರ ವಿಜಯೇಂದ್ರ.
ಹೌದು..! ಎಂಎಲ್ ಸಿ ರೇಸ್ ಗೆ ಬಿಎಸ್ ವೈ ಪುತ್ರ ಬಿ.ವೈ ವಿಜಯೇಂದ್ರ ಎಂಟ್ರಿ ಕೊಟ್ಟಿರೋದು ಯೋಗೇಶ್ವರ್ ಗೆ ಮತ್ತೆ ನಿರಾಸೆ ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಎಂಎಲ್ ಸಿ ಸ್ಥಾನಕ್ಕೆ ಸ್ವತಃ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆ ಕಳೆದ ಉಪಚುನಾವಣೆಯಲ್ಲಿ ಸೋತ ಪ್ರಭಾವಿ ಮುಖಂಡರು ಕೂಡ ರೇಸ್ ನಲ್ಲಿರುವ ಕಾರಣ ಈ ಸಲವೂ ಯೋಗೇಶ್ವರ್ ಗೆ ಎಂಎಲ್ ಸಿಸ್ಥಾನ ಸಿಗೋದು ಡೌಟ್ ಎನ್ನಲಾಗ್ತಿದೆ.
ಅದರಲ್ಲೂ ಸಿ.ಪಿ ಯೋಗೇಶ್ವರ್ ಅವರಿಗೆ ಪಕ್ಷದಲ್ಲಿರುವ ಯಾವ ನಾಯಕರು ಬೆಂಬಲ ನೀಡದೇ ಇರೋದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿಯೇ ಯೋಗೇಶ್ವರ್ ಇಲ್ಲಿಯವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಒಟ್ಟಾರೆ ಕೊರೊನಾ ಮಧ್ಯೆ ರಾಜ್ಯ ರಾಜಕಾರಣ ರಂಗೇರಿದ್ದು, ವಿಧಾನ ಪರಿಷತ್ ಚುನಾವಣೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.








