ಲಾಕ್ ಡೌನ್ ಬಳಿಕ ಮಂಗಳೂರು ಏರ್ ಪೋರ್ಟ್ ಗೆ ದುಬೈ ನಿಂದ ಮೊದಲ ವಿಮಾನ ಮಂಗಳವಾರ ರಾತ್ರಿ 10.10 ಕ್ಕೆ ಬಂದಿಳಿಯಿತು. ಸುಮಾರು 177 ಮಂದಿ ಕರಾವಳಿಗರನ್ನು ಹೊತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. 38 ಗರ್ಭಿಣಿಯರು ಸೇರಿದಂತೆ 84 ಮಹಿಳೆಯರು, 88 ಪುರುಷರು, 5 ಮಂದಿ ಮಕ್ಕಳು ಮತ್ತು ಎರಡು ಶಿಶುಗಳು ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದರು.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ ಮತ್ತು ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿತು. ಬಳಿಕ ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು.
ಮೊದಲ ವಿಮಾನದಲ್ಲಿ ಆಗಮಿಸಿದವರಲ್ಲಿ 12 ಮಂದಿ ಮೆಡಿಕಲ್ ಎಮರ್ಜನ್ಸಿಯವರು, 38 ಮಂದಿ ಗರ್ಭಿಣಿಯರಿದ್ದರೆ, ಉಳಿದವರು ವೀಸಾ ಅವಧಿ ಕೊನೆಗೊಂಡವರು ಮತ್ತು ಉದ್ಯೋಗ ಕಳೆದುಕೊಂಡವರು. ಆರೋಗ್ಯ ತಪಾಸಣೆಯ ಬಳಿಕ ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.
ದುಬೈ ನಿಂದ ಮೊದಲ ವಿಮಾನ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








