ಕೊರೊನಾದಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ 176 ಕರಾವಳಿಗರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಏರ್ ಇಂಡಿಯಾ IX 0384 ವಿಮಾನದ ಮೂಲಕ ದುಬೈನಿಂದ ವಿಮಾನ ಆಗಮಿಸಿದ್ದು, ಇಂದು ರಾತ್ರಿ ಸುಮಾರು 10:10 ಗಂಟಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ದುಬೈಯಿಂದ ಬಂದ 176 ಪ್ರಯಾಣಿಕರಲ್ಲಿ ಮಹಿಳೆಯರು, ಪುರುಷರು ಹಾಗೂ ಗರ್ಭಿಣಿಯರೂ ಇದ್ದಾರೆ.
ಪ್ರಯಾಣಿಕರಿಗೆ ವಿಮಾನ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ವಿಮಾನ ಆಗಮನ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
ಮಂಗಳೂರು ವಿಮಾನ ನಿಲ್ದಾಣ ತಲುಪಿದ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 17 ವಸತಿಗೃಹ, 12 ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್‍ಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ವಿದೇಶದಿಂದ ಬರುವವರನ್ನು ಎ ಹಾಗೂ ಬಿ ಎಂದು ಎರಡು ವಿಭಾಗ ಮಾಡಲಾಗುತ್ತಿದೆ. ಕೆಮ್ಮು ಜ್ವರ ಇರುವವರನ್ನು ಎ ವಿಭಾಗದಲ್ಲಿ ಸೇರಿಸಿ ವೆನ್ಲಾಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಿ ವಿಭಾಗದವರನ್ನು ಹಾಸ್ಟೆಲ್, ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗಿದೆ.
ವಿಮಾನದಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕಾಸರಗೋಡು ಭಾಗದ ಪ್ರಯಾಣಿಕರಿಗೆ ವಿಮಾನದಲ್ಲಿ ಅವಕಾಶ ನೀಡಿಲ್ಲ. ಅಷ್ಟೇ ಅಲ್ಲದೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರಿಗೆ ಮತ್ತು ಕುಟುಂಬಸ್ಥರಿಗೆ ಪ್ರವೇಶ ನಿಷೇಧ ಮಾಡಲಾಗಿದ್ದು, ಆಸ್ಪತ್ರೆ, ಹೋಟೆಲ್ ಮತ್ತು ಸರ್ಕಾರ ನಿಗದಿಪಡಿಸಿದ ಜಾಗಗಳಿಗೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತದಿಂದಲೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ.
ಕ್ವಾರಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. 14 ದಿನಗಳವರೆಗೆ ಕ್ವಾರಂಟೈನ್ ನಡೆದು ನಂತರ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಮುಂದುವರಿಯಲಿದೆ