ಧಾರವಾಡ: ಕಳೆದ ನವೆಂಬರ್ ನಲ್ಲಿ ನಡೆದ ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ಗೋಕಾಕ್ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಒಂದು ಸಮುದಾಯವನ್ನು ಪ್ರಚೋದಿಸುವ ರೀತಿಯಲ್ಲಿ ಭಾಷಣ ಮಾಡಿದ ಆರೋಪದ ಮೇರೆಗೆ ಯಡಿಯೂರಪ್ಪ ವಿರುದ್ಧ ನೀತಿ ಸಂಹಿತಿ ಉಲ್ಲಂಘನೆ ದೂರು ದಾಖಲಾಗಿತ್ತು.
ಆದರೆ, ದೂರು ದಾಖಲಾದ್ರೂ ಪ್ರಕರಣ ಸಂಬಂಧ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಸಂಬಂಧ ಗೋಕಾಕ್ನ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಗೋಕಾಕ್ ಜೆಎಂಎಫ್ಸಿ ಕೋರ್ಟ್, ಬಿಎಸ್ವೈ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿ ಜೂನ್ 26ರಂದು ಸಮನ್ಸ್ ಜಾರಿ ಮಾಡಿತ್ತು.
![]()
ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಹಾಗೂ ವಿಚಾರಣಾ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸುವಂತೆ ಸಿಎಂ ಯಡಿಯೂರಪ್ಪ ಧಾರವಾಡ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿ ಸಮನ್ಸ್ ಹಾಗೂ ವಿಚಾರಣಾ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.









