ಚಿಕ್ಕಮಗಳೂರು: ಕಾಫಿಡೇ ಕಂಪನಿಯ ಚೆಕ್‍ಬೌನ್ಸ್ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಉದ್ಯಮಿ ದಿ. ಸಿದ್ಧಾರ್ಥ ಹೆಗ್ಡೆ ಪತ್ನಿ ಮಾಳವಿಕಾ ಸಿದ್ದಾರ್ಥ್ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಿಗೆರೆಯ ಜೆಎಮ್‍ಎಫ್‍ಸಿ ನ್ಯಾಯಾಲಯ ಉದ್ಯಮಿ ದಿ. ಸಿದ್ಧಾರ್ಥ ಹೆಗ್ಡೆ ಪತ್ನಿ ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ 8 ಜನರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದಿ.ಸಿದ್ಧಾರ್ಥ್ ಹೆಗ್ಡೆ ಮಾಲೀಕತ್ವದ ಎಬಿಸಿ (ಕಾಫಿಡೇ ) ಕಂಪನಿ 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಕಾಫಿ ಬೀಜ ಖರೀದಿ ಮಾಡಿ ನೀಡಿದ್ದ ಚೆಕ್‍ಗಳು ಬೌನ್ಸ್ ಆಗಿವೆ ಎಂದು ಮೂಡಿಗೆರೆ ಕಾಫಿ ಬೆಳೆಗಾರ ನಂದೀಶ್ ಸೇರಿ ಹಲವರಿಂದ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಳವಿಕಾ ಸಿದ್ದಾರ್ಥ ಹೆಗ್ಡೆ, ಕಾಫಿಡೇ ಗ್ಲೋಬಲ್ ಲಿಮಿಟೆಡ್‍ನ ಎಂಡಿ ಜಯರಾಜ್ ಸಿ.ಹುಬ್ಳಿ, ಸದಾನಂದ ಪೂಜಾರಿ, ನಿತಿನ್ ಬಾಗ್ಮನೆ, ಕಿರೀಟಿ ಸಾವಂತ್, ಜಾವಿದ್ ಪರ್ವಿಜ್ ವಿರುದ್ಧ ಮೂಡಿಗೆರೆ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು.
ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಮಾಳವಿಕಾ ಸಿದ್ಧಾರ್ಥ್ ಅವರು ಕೋರ್ಟ್ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮಾಳವಿಕಾ ಅವರಿಗೆ ಜಾಮೀನು ನೀಡಿದೆ ಕಾಫಿಡೇ ಪರ ವಕೀಲ ಕೃಷ್ಣೇಗೌಡ ತಿಳಿಸಿದ್ದಾರೆ.
ಕೆಫೆ ಕಾಫಿಡೇ ಕಂಪನಿ ಸ್ಥಾಪಿಸಿದ್ದ ಸಿದ್ದಾರ್ಥ್ ಹೆಗ್ಡೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ, ಉತ್ತಮ ಬೆಲೆ ನೀಡುತ್ತಾ ಬಂದಿದ್ದರು. 2019ರ ಜುಲೈ ತಿಂಗಳಲ್ಲಿ ಸಿದ್ದಾರ್ಥ್ ಹೆಗ್ಡೆ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಕೆಲ ತಿಂಗಳ ಹಿಂದೆ ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿದ್ದ ಪೀಠೋಪಕರಣ ಉತ್ಪಾದನಾ ಸಂಸ್ಥೆ ಡ್ಯಾಫ್ಕೋ ಘಟಕವನ್ನು ಮುಚ್ಚಲಾಗಿದೆ. ಕಾಫಿ ಬೀಜ ಕೊಟ್ಟ ಕಾಫಿ ಬೆಳೆಗಾರರಿಗೆ ಹಣ ನೀಡಲಾಗದೇ ಕಾಫಿಡೇ ಸಂಸ್ಥೆ ಪರಿತಪಿಸುವ ಸ್ಥಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಪತ್ನಿ ಮಾಳವಿಕಾ ಅವರಿಗೆ ಕೋರ್ಟ್‍ನಿಂದ ವಾರೆಂಟ್ ಜಾರಿ ಮಾಡಲಾಗಿತ್ತು.