ಬೆಂಗಳೂರು: ಸದ್ಯದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆಗೆ ಕೈಹಾಕಲಿದ್ದು, ಅಸಮರ್ಥ ಸಚಿವರಿಗೆ ಸಂಪುಟದಿಂದ ಗೇಟ್ಪಾಸ್ ನೀಡಲು ಚಿಂತನೆ ನಡೆಸಿದ್ದಾರೆಂಬ ಚರ್ಚೆಗಳು ರಾಜ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಅವರನ್ನೂ ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬಳಸಿ ತಮ್ಮನ್ನು ಸಂಪುಟದಿಂದ ಕೈಬಿಡದಂತೆ ವರಿಷ್ಠರ ಮೇಲೆ ಒತ್ತಡ ಹೇರಲು ಶಶಿಕಲಾ ಜೊಲ್ಲೆ ಇಂದು ದೆಹಲಿಗೆ ದೌಡಾಯಿಸಿದ್ದಾರೆ.
ಪತಿ ಹಾಗೂ ಸಂಸದ ಅಣ್ಣಾ ಸಾಹೇಬ್ ಜತೆ ದೆಹಲಿಗೆ ಬಂದಿಳಿದ ಶಶಿಕಲಾ ಜೊಲ್ಲೆ, ಕರ್ನಾಟಕ ಭವನದಲ್ಲಿರುವ ಡಿಸಿಎಂ ಲಕ್ಷ್ಮಣ ಸವದಿ ಜತೆ ಮಾತುಕತೆ ನಡೆಸಿದ್ದಾರೆ. ಲಕ್ಷ್ಮಣ ಸವದಿ ಭೇಟಿ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಕೆಲ ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಲಕ್ಷ್ಮಣ ಸವದಿ, ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಲ ಮೂಲಗಳ ಪ್ರಕಾರ ಲಕ್ಷ್ಮಣ ಸವದಿ ಅವರನ್ನು ಕ್ಯಾಬಿನೆಟ್ ಹಾಗೂ ಡಿಸಿಎಂ ಹುದ್ದೆಯಿಂದ ಕಿತ್ತು ಹಾಕಲು ಯಡಿಯೂರಪ್ಪ ಚಿಂತನೆ ನಡೆಸುತ್ತಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಸವದಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದ ಒಂದು ವರ್ಷ ಪೂರ್ಣಗೊಂಡ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿರಲಿಲ್ಲ. ಇನ್ನು ಕೆಲವು ಮೂಲಗಳ ಪ್ರಕಾರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಮುಂದಿನ ಸಿಎಂ ಮಾಡಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಬಿರುಸಾಗಿ ನಡೆದಿವೆ ಎನ್ನಲಾಗಿದೆ.
ಈ ಎಲ್ಲಾ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಶಶಿಕಲಾ ಜೊಲ್ಲೆ ಅವರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ನನ್ನನ್ನು ಸಂಪುಟದಿಂದ ಕೈಬಿಡುತ್ತಾರೆ ಎಂಬ ಸುದ್ದಿ ಊಹಾಪೋಹ ಹಾಗೂ ಕಾಕತಾಳೀಯ. ಹೈಕಮಾಂಡ್ ಮಟ್ಟದಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸಂಪುಟ ಪುನಾರಚನೆಯೂ ಆಗಬಹುದು ಅಥವಾ ವಿಸ್ತರಣೆಯೂ ಆಗಬಹುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಸುಳಿವು ನೀಡಿದ್ದಾರೆ.
ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟಕ್ಕೆ ಮಣಿದ ಸರ್ಕಾರ : ಸಮಿತಿ ರಚನೆಗೆ ಒಪ್ಪಿಗೆ – ಆರ್. ಆಶೋಕ್
ವಕ್ಫ್ ಮಂಡಳಿ ಹಿಂದೂಗಳು ಮತ್ತು ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ. ಈ ಹೋರಾಟದಲ್ಲಿ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರಕಿದೆ....