ಮದುವೆ ದಿಬ್ಬಣ ಹೊತ್ತು ಹೊರಟಿದ್ದ ಬಸ್ಸು ಮುಂದೆ ಹೋಗುತ್ತಿದ್ದ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ 20 ಜನ ಪ್ರಯಾಣಿಕರು ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ಬಿ.ಸಿ. ರೋಡ್-ಪೊಳಲಿ ರಸ್ತೆಯ ತಿರುವಿನಲ್ಲಿ ಎರಡು ಬಸ್ ಗಳ ನಡುವೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಕಂಡು ಬಂದಿಲ್ಲ. ಘಟನೆಯಲ್ಲಿ ಗಾಯಗೊಂಡವರೆಲ್ಲರೂ ಮದುವೆಗೆ ಹೊರಟಿದ್ದರು ಎನ್ನಲಾಗಿದ್ದು, ಮದುವೆ ದಿಬ್ಬಣದ ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಹೆಚ್ಚು ಜನ ಇದ್ದುದರಿಂದ ಗಾಯಗೊಂಡವರನ್ನು ಕೂಡಲೇ ಆಂಬುಲೆನ್ಸ್ ನಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಲು ನೆರವಾಗಿದೆ. ಇನ್ನು ಈ ಸಂಬಂಧ ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










