ಬೆಂಗಳೂರು: ಗೋಹತ್ಯೆ ಹಾಗೂ ಲವ್ ಜಿಹಾದ್ ಕಾನೂನು ವಿಚಾರವಾಗಿ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಿದ್ದಾಂತದ ಜಟಾಪಟಿ ಮುಂದುವರೆದಿದೆ.
ದೇಶ ಪ್ರೇಮದ ಚಿಂತನೆಗಳ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ, ಆರ್‍ಎಸ್‍ಎಸ್ ಕಚೇರಿಗೆ ಬನ್ನಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು.
ಸಿ.ಟಿ ರವಿ ಆಹ್ವಾನಕ್ಕೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, ಕೆಪಿಸಿ ಕಚೇರಿಗೆ ಬರುವಂತೆ ಪಂಥಾಹ್ವಾನ ನೀಡಿದೆ. `ಸಿ.ಟಿ ರವಿಯವರೇ ನಿಮ್ಮನ್ನು ಕಾಂಗ್ರೆಸ್ ಕಛೇರಿಗೆ ಆಹ್ವಾನಿಸುತ್ತೇವೆ. ದೇಶದ ಇತಿಹಾಸ, ದೇಶಕ್ಕೆ ಕಾಂಗ್ರೆಸ್ ಕೊಡುಗೆ, ಜಾತ್ಯತೀತ ಸಿದ್ದಾಂತ, ಬಹುತ್ವ ಭಾರತದ ಅಂತಃಶಕ್ತಿ, ಸೌಹಾರ್ದತೆಯ ಅಗತ್ಯ, ಸಂವಿಧಾನದ ಆಶಯಗಳ ಬಗ್ಗೆ ನೀವು ತಿಳಿದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ನಿಮಗೆ ಅರಿವು ನೀಡುತ್ತೇವೆ, ಆರ್‍ಎಸ್‍ಎಸ್ ಚಿಂತನೆಗಳನ್ನ ಬಿಟ್ಟು ಕೆಪಿಸಿಸಿ ಕಚೇರಿಗೆ ಬನ್ನಿ ಎಂದು ಟ್ವಿಟರ್‍ನಲ್ಲಿ ರಾಜ್ಯ ಕಾಂಗ್ರೆಸ್ ಸವಾಲು ಹಾಕಿದೆ.
ಗಾಂಧಿ ಹತ್ಯೆಯಲ್ಲಿ ಕೈವಾಡವಿರುವ ವಿಚಾರದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಂದ ನಿಷೇಧಕ್ಕೊಳಪಟ್ಟಿದ್ದ, ತ್ರಿವರ್ಣ ಧ್ವಜವನ್ನ ಒಪ್ಪದಿದ್ದ, ಸಂವಿಧಾನವನ್ನು, ಅದರ ಆಶಯಗಳನ್ನು ಗೌರವಿಸದ ಸಂಘಟನೆಯಿಂದ ಕಲಿಯುವುದು ಏನೂ ಇಲ್ಲ, ನೀವು ಆರ್‍ಎಸ್‍ಎಸ್‍ನ ಕೋಮುವಾದಿ ಮನಸ್ಥಿತಿಯನ್ನು ಬಿಟ್ಟು ಬನ್ನಿ, ಸಂವಿಧಾನದ ಪಾಠವನ್ನು ನಾವು ಕಲಿಸುತ್ತೇವೆ ಎಂದು ಮತ್ತೊಂದು ಟ್ವೀಟ್‍ನಲ್ಲಿ ಸಿ.ಟಿ ರವಿಗೆ ಅವರಿಗೆ ತಿರುಗೆಟು ನೀಡಿದೆ.
ನಿಮ್ಮ ಕಚೇರಿ ಬಾಗಿಲು ತುಳಿಯುವ ದೌರ್ಭಾಗ್ಯ ಬಂದಿಲ್ಲ-ಸಿ.ಟಿ ರವಿ
ಕಾಂಗ್ರೆಸ್ ಕಚೇರಿಗೆ ಬರುವಂತೆ ಆಹ್ವಾನ ನೀಡಿರುವ ಕಾಂಗ್ರೆಸ್‍ಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ಒಂದು ಕುಟುಂಬಕ್ಕೋಸ್ಕರ ದೇಶವನ್ನು ಬಲಿ ನೀಡಿದ್ದೇ ನಿಮ್ಮ ಸಾಧನೆಯಲ್ಲವೇ? ಗಾಂಧಿಯವರ ತತ್ವಸಿದ್ಧಾಂತ ಕೊಂದ ನೀವು ಇನ್ನೊಬ್ಬರಿಗೆ ಬೋಧನೆ ಮಾಡುತ್ತಿದ್ದೀರಾ? ಸಂವಿಧಾನವನ್ನು ಧಿಕ್ಕರಿಸಿದ ನಿಮ್ಮಿಂದ ಅದರ ಆಶಯಗಳನ್ನು ತಿಳಿದುಕೊಳ್ಳಬೇಕೆ ನಾನು?
ಕೋಮುವಾದದ ಹೊಂಡದಲ್ಲಿ ಮುಳುಗಿರುವ ನಿಮಗೆ ಆರ್.ಎಸ್.ಎಸ್ ಕುರಿತು ಮಾತನಾಡುವ ಅರ್ಹತೆ ಇದೆಯೇ?
ಅಯ್ಯೋ ಕಾಂಗ್ರೆಸ್ ಪಕ್ಷವೇ, ದೇಶದಾದ್ಯಂತ ಮುಳುಗುತ್ತಿರುವ ನಿಮ್ಮ ಪಕ್ಷದ ಇತಿಹಾಸವೇ 1969 ರಿಂದ ಪ್ರಾರಂಭವಾಗಿರುವಾಗ, ದೇಶದ ಇತಿಹಾಸದ ಬಗ್ಗೆ ನೀವೇನು ಹೇಳಿ ಕೊಡುತ್ತೀರಾ ನನಗೆ? ಒಂದು ಕೋಮಿನ ಓಲೈಕೆ ಮಾಡುವುದೇ ಜಾತ್ಯತೀತ ಸಿದ್ಧಾಂತವೇ?
ದೇಶದಾದ್ಯಂತ ಮುಳುಗುತ್ತಿರುವ ನಿಮ್ಮ ಪಕ್ಷದ ಕಚೇರಿಯ ಬಾಗಿಲು ತುಳಿಯುವ ದೌರ್ಭಾಗ್ಯ ನನಗೆ ಬಂದಿಲ್ಲ ಮತ್ತು ಬರುವುದೂ ಇಲ್ಲ ಎಂದು ಕಾಂಗ್ರೆಸ್‍ಗೆ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel