ಕನ್ನಡ ನೆಲ ಜಲ ಭಾಷೆ ಬೆಳಸಲು ನಮ್ಮ ಸರ್ಕಾರ ಬದ್ದ – ಸಿ ಎಂ ಬೊಮ್ಮಾಯಿ…
ಕನ್ನಡವನ್ನು ರಕ್ಷಿಸಲು ಹಾಗೂ ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ನಮ್ಮ ಪಕ್ಷ ಹಾಗೂ ಸರ್ಕಾರ ಎಂದಿಗೂ ರಾಜಕೀಯದ ಹೊರತಾಗಿ ಚಿಂತಿಸುತ್ತೇವೆ. ಕನ್ನಡದ ಬಳಕೆಯನ್ನು ಹೆಚ್ಚಿಸಲು ಕನ್ನಡವನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸುವ ಕಾನೂನನ್ನು ಈ ಸದನದಲ್ಲಿಯೇ ಮಂಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜೆಡಿಎಸ್ ಶಾಸಕರು ಹಿಂದಿ ದಿವಸ್ ಆಚರಣೆ ಬಗ್ಗೆ ಪ್ರಸ್ತಾಪಿಸಿದಾಗ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಅಗ್ರಮಾನ್ಯ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು. ಇದುವರೆಗೂ ಕನ್ನಡ ಕಡ್ಡಾಯಗೊಳಿಸಲು ಕಾನೂನು ಸ್ವರೂಪ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡವನ್ನು ಕಡ್ಡಾಯಗೊಳಿಸಲು ಸಂಬಂಧ ವಿಧೇಯಕ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದ್ದು, ಕಾನೂನಾತ್ಮಕವಾಗಿ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಲಾಗುವುದು. ಭಾಷೆ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಸಮಿತಿಗಳು ಅಸ್ತಿತ್ವದಲ್ಲಿದ್ದರೂ ಕನ್ನಡ ಕಡ್ಡಾಯಗೊಳಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ನೆಲೆಸಿರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸಲು ಒತ್ತು ನೀಡಲಾಗುವುದು ಎಂದರು.








