ನವದೆಹಲಿ: ಕೊರೊನಾ ವೈರಸ್ ದೇಶವನ್ನು ತಲ್ಲಣಗೊಳಿಸಿದೆ. ಜನ ಸಾಮಾನ್ಯರು ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಿಜೆಪಿ ದ್ವೇಷ ಬಿತ್ತುವ ಹಾಗೂ ಕೋಮು ಭಾವನೆ ಕೆರಳಿಸುವ ತನ್ನ ಕೆಲಸವನ್ನು ಮುಂದುವರೆಸಿದೆ. ದೇಶ ಒಟ್ಟಾಗಿರುವಾಗ ಬಿಜೆಪಿ ಕೋಮು ವಿಭಜನೆಯ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಸೋನಿಯಾ ಗಾಂಧಿಯವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ಮೂರು ವಾರಗಳಿಂದ ಕೊರೊನಾ ವೈರಸ್ ಜನ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ ಮಾಡಿದ್ದು, ವೈರಸ್ ವಿರುದ್ಧ ಹೋರಾಡಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ನಮ್ಮ ಪಕ್ಷ ಕೂಡ ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ನೀಡಿದೆ. ಈ ಕುರಿತು ಪ್ರಧಾನಮಂತ್ರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇವೆ. ಆದರೆ, ನಾವು ನೀಡಿದ ಸಲಹೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆಗಳೂ ಬಂದಿಲ್ಲ. ಕೇವಲ ನೆಪ ಮಾತ್ರಕ್ಕೆ ವಿರೋಧ ಪಕ್ಷಗಳ ಅನಿಸಿಕೆ ಕೇಳುತ್ತಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ನೀಡಿದ ಯಾವುದೇ ಸಲಹೆಗಳನ್ನು ಅಳವಡಿಸಿಕೊಳ್ಳದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿಕೆ ಬಳಿಕ ಬಡವರ ಪರ ಸಹಾನುಭೂತಿಯನ್ನೇ ತೋರುತ್ತಿಲ್ಲ ಎಂದು ಆರೋಪಿಸಿರುವ ಸೋನಿಯಾ ಅವರು, ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ.
ಅಲ್ಲದೆ ಮೇ.3ರ ಬಳಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪರಿಜ್ಞಾನವೇ ಇಲ್ಲದಂತಾಗಿದೆ. ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಕಠಿಣಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.








