ಬೆಂಗಳೂರು : ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ಪ್ರಕರಣವನ್ನು ಒಂದು ಸಮುದಾಯಕ್ಕೆ ಅಂಟಿಸುವುದು ಬೇಡ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರದ ಘಟನೆಗೆ ನಮ್ಮ ವಿರೋಧವಿದೆ. ಪಾದರಾಯನಪುರದಲ್ಲಿ ಕೆಲ ವ್ಯಕ್ತಿಗಳು ಮಾಡಿರುವಂತಹ ಕೃತ್ಯ ಇದು. ಹಾಗಾಗಿ ಇದನ್ನು ಒಂದು ಸಮುದಾಯಕ್ಕೆ ಅಂಟಿಸುವುದು ಬೇಡ. ತಪ್ಪು ಯಾರೇ ಮಾಡಿದ್ದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಇಂತಹ ವಿಚಾರದಲ್ಲಿ ಸರ್ಕಾರದ ಜೊತೆ ನಾವಿದ್ದೇವೆ ಎಂದರು. ಇನ್ನು ಕೆಲ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸಚಿವರು, ಶಾಸಕರ ಹೇಳಿಕೆ ಬಗ್ಗೆ ಸಿಎಂ ಯಡಿಯೂರಪ್ಪ ಗಮನ ಹರಿಸಲಿ. ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಬಿಜೆಪಿ ನಾಯಕರು ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದರು ವ್ಯಕ್ತಿಗಳು ಮಾಡಿರುವ ತಪ್ಪಿಗೆ ವ್ಯಕ್ತಿಗಳಿಗೆ ಶಿಕ್ಷೆ ಆಗಲಿ. ಒಂದು ಸಮುದಾಯಕ್ಕೆ ಶಿಕ್ಷೆ ಆಗಬಾರದು. ಕೊರೊನಾ ವಿಚಾರವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಪರ ನಾವು ಇರುತ್ತೇವೆ. ಸರ್ಕಾರ ಜೊತೆ ನಾವು ಇರುತ್ತೇವೆ ಎಂದು ಹೇಳಿದರು.








