ಶಿವಮೊಗ್ಗ, ಜೂನ್ 7 : ಈಗ ಕೊರೊನಾ ಯುಗ. ಎಲ್ಲೆಡೆಯೂ ಕೊರೊನಾ ಸೋಂಕಿನ ಬಗ್ಗೆ, ಸೀಲ್ ಡೌನ್ ಬಗ್ಗೆಯೇ ಮಾತು. ಎಲ್ಲೆಡೆಯೂ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ ಮಾರ್ಗಸೂಚಿಗಳು, ಜಾಗೃತಿ ಸಂದೇಶಗಳು.
ಈ ನಡುವೆ ಶಿವಮೊಗ್ಗದಲ್ಲಿ ಮದುವೆಯೊಂದರ ಆಮಂತ್ರಣ ಪತ್ರದಲ್ಲಿ ಪ್ರೀತಿಯನ್ನು ಕೊರೊನಾ ಸೋಂಕಿಗೆ, ನಿಶ್ಚಿತಾರ್ಥವನ್ನು ಲಾಕ್ ಡೌನ್ ಗೆ ಮತ್ತು ಮದುವೆಯನ್ನು ಸೀಲ್ ಡೌನ್ ಗೆ ಹೋಲಿಸಿ ಪ್ರಕಟಿಸಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯುವಕ ವಿನೋದ್ ಎಂಬುವವರು ಚಂದನಾರೊಂದಿಗೆ ಇದೇ ಜೂನ್ 15ರಂದು ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಇವರ ವಿವಾಹಕ್ಕೆ ವರ ವಿನೋದ್ ಪ್ರೀತಿಯನ್ನು ಕೊರೊನಾ ಸೋಂಕಿಗೆ, ನಿಶ್ಚಿತಾರ್ಥವನ್ನು ಲಾಕ್ ಡೌನ್ ಗೆ ಮತ್ತು ಮದುವೆಯನ್ನು ಸೀಲ್ ಡೌನ್ ಗೆ ಹೋಲಿಸಿ ವಿಭಿನ್ನವಾದ ಲಗ್ನ ಪತ್ರಿಕೆ ಮಾಡಿಸಿದ್ದಾರೆ.

ಲಗ್ನ ಪತ್ರಿಕೆಯಲ್ಲಿ ವಿನೋದ್ ಹಾಗೂ ಚಂದನಾ ಇವರಿಬ್ಬರಿಗೂ ಪರಸ್ಪರ ಪ್ರೀತಿ ಎಂಬ ಸೋಂಕು ಇರುವುದು ದೃಢಪಟ್ಟಿದ್ದು, ನಿಶ್ಚಿತಾರ್ಥದ ಮೂಲಕ ಲಾಕ್‍ಡೌನ್ ಮಾಡಿ, ಮದುವೆ ಎಂಬ ಸೀಲ್‍ಡೌನ್ ಮಾಡಿ, ನಂತರ ಜೀವನವಿಡಿ ಲವ್ ಕ್ವಾರಂಟೈನ್ ಮಾಡಲು ಗುರುಹಿರಿಯ ಬಂಧುಮಿತ್ರರು ತೀರ್ಮಾನಿಸಿದ್ದು, ತಾವುಗಳು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಜರ್ ಹಚ್ಚಿಕೊಂಡು ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವಾದ ಮಾಡಬೇಕು ಎಂದು ಅಹ್ವಾನಿಸುತ್ತೇವೆ ಎಂದು ಬರೆಯಲಾಗಿದೆ








