ಭಾರತ ಮತ್ತು ಚೀನಾ ನಡುವೆ ಸಂಘರ್ಷ ಸ್ಥಿತಿ ನಿರ್ಮಾಣ – ಯಾವುದೇ ಸ್ಥಿತಿ ಎದುರಿಸಲು ಭಾರತೀಯ ಸೇನೆ ಸನ್ನದ್ಧ
ಹೊಸದಿಲ್ಲಿ, ಸೆಪ್ಟೆಂಬರ್04: ಎರಡು ದಿನಗಳ ಲಡಾಖ್ ಪ್ರವಾಸದಲ್ಲಿರುವ ಆರ್ಮಿ ಚೀಫ್ ಜನರಲ್ ಎಂ.ಎಂ.ನರವಾಣೆ ಅವರು ಶುಕ್ರವಾರ (ಸೆಪ್ಟೆಂಬರ್ 4), ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಪರಿಸ್ಥಿತಿ ಗಂಭೀರವಾಗಿದೆ. ಪಡೆಗಳ ಸುರಕ್ಷತೆಯನ್ನು ಪರಿಗಣಿಸಿ ಮುನ್ನೆಚ್ಚರಿಕೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಎಲ್‌ಎಸಿಯ ಉದ್ದಕ್ಕೂ ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸುರಕ್ಷತೆಗಾಗಿ ನಾವು ಮುನ್ನೆಚ್ಚರಿಕೆ ನಿಯೋಜನೆಯನ್ನು ಕೈಗೊಂಡಿದ್ದೇವೆ. ನಮ್ಮ ಸುರಕ್ಷತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯಾವುದೇ ಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.
ನಾನು ಲೇಹ್ ತಲುಪಿದ ನಂತರ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದೆ. ಗಡಿಯಲ್ಲಿ ಒಂದು ರೀತಿಯ ಗಂಭೀರ ವಾತಾವರಣ ನಿರ್ಮಾಣವಾಗಿದ್ದು ಅಧಿಕಾರಿಗಳು, ಜೆಸಿಒಗಳೊಂದಿಗೆ ಮಾತನಾಡಿದ್ದೇನೆ. ನಮ್ಮ ಯೋಧರ ಮನೋಸ್ಥೈರ್ಯ ಹೆಚ್ಚಾಗಿದೆ ಮತ್ತು ಅವರು ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ನರಾವಣೆ ತಿಳಿಸಿದರು.
ಯೋಧರ ಹೆಚ್ಚು ಪ್ರೇರಿತರಾಗಿದ್ದಾರೆ, ಅವರು ಹೆಚ್ಚಿನ ಆತ್ಮಸ್ಥೈರ್ಯ ಹೊಂದಿದ್ದು, ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ತಿಳಿಸಿರುವುದಾಗಿ ನರಾವಣೆ ಹೇಳಿದರು.
ಸೆಪ್ಟೆಂಬರ್ 4 ರಂದು, ನರಾವಣೆ ಪೂರ್ವ ಲಡಾಖ್ ಪ್ರದೇಶದ ಭದ್ರತಾ ಪರಿಸ್ಥಿತಿಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು, ಚೀನಾ ದಕ್ಷಿಣದ ಪ್ಯಾಂಗೊಂಗ್ ಸರೋವರದ ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸಲು ಹೊಸ ಪ್ರಯತ್ನಗಳನ್ನು ಮಾಡಿದ ಕೆಲ ದಿನಗಳ ನಂತರ, ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ








