ಹಿಟ್ ಮ್ಯಾನ್ ರೋಹಿತ್ ಶರ್ಮಾ ನಿಜವಾಗಿಯೂ ಗಂಭೀರ ಗಾಯದಿಂದ ಬಳಲುತ್ತಿದ್ರಾ ?
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯವನ್ನು ಆಯ್ಕೆ ಮಾಡಲಾಗಿದೆ. ಕೆಲವೊಂದು ಅಚ್ಚರಿಯ ಸೇರ್ಪಡೆ, ಕೆಲವೊಂದು ನಿರೀಕ್ಷಿತ ಆಯ್ಕೆ ಹಾಗೂ ಮತ್ತೆ ಕೆಲವು ಅಚ್ಚರಿಯ ನಿರ್ಧಾರದೊಂದಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ.
ಸಾಮಾನ್ಯವಾಗಿ ಟೀಮ್ ಇಂಡಿಯವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿ ಕೆಲವೊಂದು ಕಟ್ಟು ನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಹೀಗಾಗಿ ಆಯ್ಕೆ ಸಮಿತಿಯ ಮುಂದೆ ಟೀಕೆ, ಆರೋಪಗಳು ಕೇಳಿಬರುವುದು ಸಹಜ. ಅದು ಮಾಮೂಲಿ ಕೂಡ.
ಆದ್ರೆ ಈಗ ಪ್ರಶ್ನೆ ಬಂದಿರುವುದು ರೋಹಿತ್ ಶರ್ಮಾ ವಿಚಾರದಲ್ಲಿ.
ಹೌದು, ರೋಹಿತ್ ಶರ್ಮಾ ಅವರು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಆಡಿಲ್ಲ. ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ ಮೆಂಟ್ ಪ್ರಕಾರ ನವೆಂಬರ್ 3ರ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗುತ್ತಾರೆ ಅನ್ನೋ ಮಾಹಿತಿ ಇದೆ.
ಆದ್ರೆ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಮೂರು ಮಾದರಿಯ ಕ್ರಿಕೆಟ್ ನಿಂದ ಅವರನ್ನು ಹೊರಗಿಡಲಾಗಿದೆ.
ಇದಕ್ಕೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ನೀಡಿರುವ ಕಾರಣ ಗಾಯ.
ಒಂದು ವೇಳೆ ರೋಹಿತ್ ಶರ್ಮಾ ಅಷ್ಟೊಂದು ಗಂಭೀರವಾದ ಗಾಯವಾಗಿದ್ದರೆ ಅವರು ಐಪಿಎಲ್ ಟೂರ್ನಿಯಿಂದಲೇ ಹೊರನಡೆಯಬೇಕಾಗಿತ್ತು. ಆದ್ರೆ ರೋಹಿತ್ ಶರ್ಮಾ ಐಪಿಎಲ್ ನ ಮುಂದಿನ ಪಂದ್ಯಗಳಲ್ಲಿ ಆಡುವ ಸಾಧ್ಯತೆಗಳು ಕೂಡ ಇವೆ.
ಇನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಸುಮಾರು ಒಂದು ತಿಂಗಳ ಸಮಯವಿದೆ. ಅಷ್ಟೊತ್ತಿಗೆ ರೋಹಿತ್ ಶರ್ಮಾ ಗಾಯದಿಂದ ವಾಸಿಯಾಗಬಹುದು.
ಒಂದು ವೇಳೆ ತೀವ್ರ ಸ್ವರೂಪದ ಗಾಯವಾಗಿರುತ್ತಿದ್ರೆ ಐಪಿಎಲ್ ನ ಮುಂದಿನ ಪಂದ್ಯಗಳಲ್ಲಿ ಹೇಗೆ ಆಡುತ್ತಾರೆ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಇನ್ನು ಬಿಸಿಸಿಐ ರೋಹಿತ್ ಶರ್ಮಾ ಅವರ ಗಾಯದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಎಲ್ಲೋ ಒಂದು ಕಡೆ ಕಣ್ಣಾಮುಚ್ಚಾಳೆಯಾಟವಾಡುತ್ತಿದೆ ಎಂಬ ಅನುಮಾನ ಕೂಡ ಮೂಡಿ ಬರುತ್ತಿದೆ.
ಇಲ್ಲಿ ಇನ್ನೊಂದು ಪ್ರಶ್ನೆ ಎದ್ದು ಕಾಣುತ್ತದೆ.. ರೋಹಿತ್ ಶರ್ಮಾನಂತಹ ಆಟಗಾರರನ್ನು ಕೇವಲ ಗಾಯದ ಕಾರಣದಿಂದ ಸುದೀರ್ಘ ಸರಣಿಯಿಂದ ಹೊರಗಿಡಬೇಕಾದ್ರೆ ಬಲವಾದ ಕಾರಣವಂತೂ ಇದ್ದೇ ಇದೆ.
ಆದ್ರೆ ಆ ಕಾರಣ ಏನು ಎಂಬುದನ್ನು ಬಿಸಿಸಿಐ ಬಿಟ್ಟುಕೊಡುತ್ತಿಲ್ಲ. ಹಾಗೇ ನೋಡಿದ್ರೆ ಮಯಾಂಕ್ ಅಗರ್ ವಾಲ್ ಕೂಡ ಗಾಯದಿಂದಲೇ ಕಳೆದ ಎರಡು ಪಂದ್ಯಗಳಲ್ಲಿ ಆಡಿಲ್ಲ. ಮುಂದಿನ ಪಂದ್ಯಗಳಲ್ಲಿ ಅವರು ಆಡಬಹುದು.
ಇಲ್ಲಿ ಗಾಯಗೊಂಡಿರುವ ಮಯಾಂಕ್ ಅಗರ್‍ವಾಲ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದ್ರೆ ರೋಹಿತ್ ಶರ್ಮಾಗೆ ಸ್ಥಾನ ಕೊಟ್ಟಿಲ್ಲ.
ಇನ್ನೊಂದು ಪ್ರಶ್ನೆ ಅಂದ್ರೆ ಮಯಾಂಕ್ ಅಗರ್ ವಾಲ್ ಅವರು ಅರ್ಹವಾಗಿಯೇ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.
ಆದ್ರೆ ಟೀಮ್ ಇಂಡಿಯಾದ ಅಪಾಯಕಾರಿ ಬ್ಯಾಟ್ಸ್ ಮೆನ್ ಆಗಿರುವ ರೋಹಿತ್ ಶರ್ಮಾ ಅವರನ್ನು ಕೇವಲ ಗಾಯದ ಕಾರಣದಿಂದ ತಂಡದಿಂದ ಹೊರಗಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ?
ಅದೂ ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಸುಮಾರು ಮೂರು ತಿಂಗಳುಗಳ ಕಾಲ ನಡೆಯಲಿದೆ. ಹೀಗಾಗಿ ರೋಹಿತ್ ಶರ್ಮಾ ಆಯ್ಕೆಯ ಮಾನದಂಡ ಏನು ಎಂಬುದು ಗೊತ್ತಿಲ್ಲ.
ಇನ್ನು ರೋಹಿತ್ ಶರ್ಮಾ ಅವರ ಫಿಟ್ ನೆಸ್ ಬಗ್ಗೆ ತಕಾರಾರು ಇದೆ. ಯೋ ಯೋ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದರೂ ಆಗಿರಬಹುದು.
ಒಂದು ವೇಳೆ ರೋಹಿತ್ ಶರ್ಮಾ ಯೋ ಯೋ ಟೆಸ್ಟ್ ನಲ್ಲಿ ಫೇಲ್ ಆಗಿದ್ರೆ ಅದಕ್ಕೆ ಬಿಸಿಸಿಐ ಸ್ಪಷ್ಟನೇ ಕೊಡಬೇಕಿತ್ತು. ಆದ್ರೆ ಬಿಸಿಸಿಐ ಪಾರದರ್ಶಕತೆಯನ್ನಿಟ್ಟುಕೊಂಡಿಲ್ಲ.
ಹಾಗೇ ರೋಹಿತ್ ಶರ್ಮಾ ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಆಡಿದ್ರೆ ಬಿಸಿಸಿಐ ಮುಜುಗರಕ್ಕೀಡಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ತಂಡದಿಂದ ಹೊರಗಿಟ್ಟಿರುವುದು ಹಲವು ಪ್ರಶ್ನೆಗಳು ಮತ್ತು ಟೀಕೆಗಳಿಗೆ ಕಾರಣವಾಗಿವೆ.








