ಶೇ 95 ರಷ್ಟು ಚುನಾವಣಾ ಬಾಂಡ್ ದೇಣಿಗೆ BJP ಗೆ ಹರಿದು ಬರುತ್ತಿದೆ – ಅಶೋಕ್ ಗೆಹ್ಲೋಟ್
ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಬರುತ್ತಿರುವ ಶೇ 95ರಷ್ಟು ದೇಣಿಗೆ ಬಿಜೆಪಿಗೆ ಬರುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ದಾನಿಗಳು ಹೆದರಿ ಬೇರೆ ಪಕ್ಷಗಳಿಗೆ ಹಣ ನೀಡುತ್ತಿಲ್ಲಎಂದು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೂರತ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬಿಜೆಪಿಗೆ ಹೆಚ್ಚಿನ ದೇಣಿಗೆ ಬರುತ್ತಿದ್ದು, ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಜೆಪಿ ಬೆದರಿಕೆ ಹಾಕುತ್ತಿದ್ದು, ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ದೇಣಿಗೆ ನೀಡಬೇಡಿ ಎಂದು ಹೇಳುತ್ತಿದೆ. ಬಿಜೆಪಿ ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳಿಗೆ ಯಾರಾದರೂ ದೇಣಿಗೆ ನೀಡಿದರೆ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಕ್ಷಣವೇ ಆ ದಾನಿಗಳ ಮನೆಗಳ ಬಾಗಿಲು ತಟ್ಟುತ್ತಾರೆ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ದೇಣಿಗೆ ಕೂಡ ಒಂದೇ ಪಕ್ಷಕ್ಕೆ ಹೋಗುತ್ತಿದೆ. ಬಿಜೆಪಿಯವರು ದೊಡ್ಡ ಮಟ್ಟದಲ್ಲಿ ಹಣದ ಹೊಳೆ ಹರಿಸುತ್ತಿದ್ದು, ದೇಶದೆಲ್ಲೆಡೆ ಪಂಚತಾರಾ ಪಕ್ಷದ ಕಚೇರಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅಶೋಕ್ ಗ್ಲೆಹೋಟ್ ಹೇಳಿದ್ದಾರೆ.
ದೇಣಿಗೆ ಮೂಲಕ ಪಡೆದ ಹಣದಲ್ಲಿ ರಾಜ್ಯ ಸರ್ಕಾರಗಳನ್ನು ಬದಲಾಯಿಸಲಾಗುತ್ತಿದೆ ಎಂದರು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳನ್ನ ಉರುಳಿಸಿದ್ದನ್ನು ಸ್ಮರಿಸಿದರು. ಬಿಜೆಪಿ ಫ್ಯಾಸಿಸ್ಟ್ ಶಕ್ತಿಯಾಗಿದೆ ಎಂದ ಅವರು ಧರ್ಮದ ಆಧಾರದ ಮೇಲೆ ಪಕ್ಷ ಗೆಲ್ಲುತ್ತಿದೆಯೇ ಹೊರತು ನೀತಿ, ಯೋಜನೆ, ಸಿದ್ಧಾಂತಗಳ ಆಧಾರದಲ್ಲಿ ಅಲ್ಲ ಎಂದರು.
ಗುಜರಾತ್ ಮಹಾತ್ಮಾ ಗಾಂಧೀಜಿಯವರ ಜನ್ಮಸ್ಥಳ, ಆದರೆ ಇಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ವಾತಾವರಣವಿದೆ. ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಎಲ್ಲ ವರ್ಗದ ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ. ಈ ಸರ್ಕಾರವನ್ನು ಬದಲಾಯಿಸುವ ಸಮಯ ಬಂದಿದೆ. ಮುಂದಿನ ಸರ್ಕಾರ ರಚಿಸಲು ಕಾಂಗ್ರೆಸ್ ಸಿದ್ಧವಿದೆ ಎಂದರು.
Congress: 95% of election bond donations are flowing to BJP – Ashok Gehlot








