ಮೇಲ್ಮನೆಯಲ್ಲಿ “ಅನರ್ಹರ” ಸದ್ದು!
ಆಡಳಿತ-ಪ್ರತಿಪಕ್ಷಗಳ ನಡುವೆ ಭಾರಿ ಗದ್ದಲ
ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್
ಬೆಂಗಳೂರು: ಉಪಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದ ಅನರ್ಹ ಪದ ಇದೀಗ ಮತ್ತೆ ಸದ್ದು ಮಾಡಿದೆ. ವಿಧಾನ ಪರಿಷತ್ ನಲ್ಲಿ ಅನರ್ಹರು, ಅನರ್ಹರ ಸರ್ಕಾರ ಎಂಬ ಮಾತು ಆಡಳಿತ-ಪ್ರತಿಪಕ್ಷಗಳ ನಡುವೆ ಭಾರಿ ಗದ್ದಲಕ್ಕೆ ಕಾರಣವಾಯಿತು. ಮೇಲ್ಮನೆಯಲ್ಲಿ ಕಾನೂನು ಸುವ್ಯವಸ್ಥೆ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಕಾಂಗ್ರೆಸ್ ನ ಆರ್.ಬಿ ತಿಮ್ಮಾಪುರ ಮಾತನಾಡಿ, ರಾಜ್ಯದಲ್ಲಿ ಗೋಲಿಬಾರ್ ಮಾಡಿದ ಯಾವ ಸರ್ಕಾರವೂ ಉಳಿದಿಲ್ಲ ಎಂದು ಹೇಳಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಐವಾನ್ ಡಿಸೋಜಾ, ಈಗಿನ ಸರ್ಕಾರ ಸಹ ಉಳಿಯುವುದಿಲ್ಲ ಎನ್ನುತ್ತಿದ್ದಂತೆ, ಇವರ ಮಾತಿಗೆ ಧ್ವನಿಗೂಡಿಸಿದ ನಾರಾಯಣ್ ಸ್ವಾಮಿ, ಹೌದೌದು, ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಇದು ಅನರ್ಹ ಸರ್ಕಾರ, ಅನರ್ಹರ ಸರ್ಕಾರ. ಹದಿನೇಳು ಅನರ್ಹರು ಬಿಜೆಪಿಗೆ ಹೋಗಿದ್ದಕ್ಕಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಕುಟುಕಿದರು.
ಸದನದಲ್ಲಿ ಅನರ್ಹ ಪದ ಪ್ರಯೋಗವಾಗುತ್ತಲೇ ಸಿಡಿಮಿಡಿಗೊಂಡ ಸಚಿವರಾದ ಬಿ.ಸಿಪಾಟೀಲ್ ಮತ್ತು ಎಸ್. ಟಿ ಸೋಮಶೇಖರ್ ಏರುಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಿದ್ರು.
“ನಾವು ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ. ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮನ್ನು ಅನರ್ಹರು ಎನ್ನಲು ನಿಮಗೆ ಮಾನ ಮರ್ಯಾದೆ ಇಲ್ಲವೇ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿ ಗೆದ್ದು ಬಂದಿದ್ದೇವೆ” ಎಂದು ಸಚಿವ ಸೋಮಶೇಖರ್ ಸ್ಪಷ್ಟೀಕರಣ ನೀಡುತ್ತಿದ್ದಂತೆಯೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿತು.








