ಚಬಹಾರ್ ರೈಲು ಯೋಜನೆ ಕೈ ತಪ್ಪಿದ್ದಕ್ಕೆ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಟೀಕಾಸ್ತ್ರ
ಹೊಸದಿಲ್ಲಿ, ಜುಲೈ 15: ಭಾರತದಿಂದ ಧನಸಹಾಯ ವಿಳಂಬದ ಕಾರಣ ನೀಡಿ ಇರಾನ್ ತಾನೇ ಸ್ವತಃ ಚಬಹಾರ್ ಬಂದರು ರೈಲು ಯೋಜನೆ ನಿರ್ಮಿಸಲು ನಿರ್ಧರಿಸಿದೆ. ಹಾಗೇ ಭಾರತವನ್ನು ಈ ಯೋಜನೆಯಿಂದ ಕೈಬಿಟ್ಟಿದೆ ಎಂಬ ಸುದ್ದಿ ವರದಿಯಾದ
ಬೆನ್ನಲ್ಲೇ ವಿರೋಧ ಪಕ್ಷ ಕಾಂಗ್ರೆಸ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸಿದೆ. ಅಷ್ಟೇ ಅಲ್ಲ ದೇಶಕ್ಕೆ ಇದು ದೊಡ್ಡ ನಷ್ಟ ಎಂದು ಹೇಳಿದೆ.
ಇರಾನ್, ಚಹಬಾರ್ ಬಂದರು ಒಪ್ಪಂದದಿಂದ ಭಾರತವನ್ನು ಕೈಬಿಟ್ಟಿರುವುದನ್ನು ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಇದು ಮೋದಿ ಸರ್ಕಾರದ ರಾಜತಾಂತ್ರಿಕತೆಯಾಗಿದ್ದು, ಕೆಲಸಗಳನ್ನು ಮಾಡದೆಯೇ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಚೀನಾ ಸದ್ದಿಲ್ಲದೆ ಕೆಲಸ ಮಾಡಿ ಉತ್ತಮ ವ್ಯವಹಾರವನ್ನು ನಡೆಸಿತು. ಭಾರತಕ್ಕೆ ಇದು ದೊಡ್ಡ ನಷ್ಟ. ಆದರೆ ನೀವು ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ವ್ಯಾಪಾರ ಮಾರ್ಗ ಕಂಡುಕೊಳ್ಳುವ ಸಲುವಾಗಿ 2016ರಲ್ಲಿ ಭಾರತ-ಇರಾನ್-ಅಫ್ಘಾನಿಸ್ತಾನ ನಡುವೆ ಚಬಹರ್ ತ್ರಿಪಕ್ಷೀಯ ಒಪ್ಪಂದ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಇರಾನ್ ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ನಡುವೆ ತ್ರಿಪಕ್ಷೀಯ ಒಪ್ಪಂದವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಭಾರತ ನಾಲ್ಕು ವರ್ಷಗಳಾದರೂ ಚಹಬರ್ ಬಂದರಿನಿಂದ ಜಾಹೇದನ್ಗೆ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡಿಲ್ಲ ಎಂಬ ಕಾರಣ ನೀಡಿ ಇರಾನ್ ತಾನೇ ಸ್ವತಃ ರೈಲು ಮಾರ್ಗ ನಿರ್ಮಿಸಲು ಮುಂದಾಗಿದೆ ಮತ್ತು ಭಾರತವನ್ನು ಈ ಯೋಜನೆಯಿಂದ ಕೈಬಿಟ್ಟಿದೆ.
ಇರಾನಿಯನ್ ನ್ಯಾಷನಲ್ ಡೆವಲಪ್ಮೆಂಟ್ ಫಂಡ್ನಿಂದ ಈ ಯೋಜನೆಗಾಗಿ 400 ಮಿಲಿಯನ್ ಡಾಲರ್ ಮಂಜೂರು ಮಾಡಲಾಗಿದ್ದು, ಇರಾನ್ ಪ್ರಾರಂಭ ಮಾಡಲಿರುವ ರೈಲು ಮಾರ್ಗ ಯೋಜನೆ ಮಾರ್ಚ್ 22ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಲಿಮಿಟೆಡ್ನಿಂದ 1.6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತಾದರೂ ಅಮೆರಿಕ ಇರಾನ್ ಮೇಲೆ ನಿರ್ಬಂಧ ಹೇರಿದ್ದರಿಂದ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯಕ್ಕೆ ಭಾರತ ಮುಂದಾಗಿರಲಿಲ್ಲ.