ಬೆಂಗಳೂರು : ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳದೆ ಓಡಾಡುತ್ತಿರುವ ಮುಸ್ಲಿಮರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಕೆ ನೀಡಿದ್ದ ಶಾಸಕ ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ರೇಣುಕಾಚಾರ್ಯ ಅವರ ಹೇಳಿಕೆ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ವಿವಾದಾತ್ಮಕ ಹೇಳಿಯನ್ನು ನೀಡಿದ್ದು ಅವರ ವಿರುದ್ಧವೂ ಕ್ರಮಕ್ಕೆ ಸಲೀಂ ಅಹಮ್ಮದ್ ಒತ್ತಾಯಿಸಿದ್ದಾರೆ.
ಕೊರೊನಾದಿಂದ ರಾಜ್ಯ ತಲ್ಲಣಗೊಂಡಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಶಾಸಕರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಸ್ಲಿಮರು ಸಂಪೂರ್ಣ ಸಹಕಾರ ಕೊಡುವುದಾಗಿ ಸಿಎಂ ಸಭೆಯಲ್ಲಿ ಭರವಸೆ ನೀಡಿದ್ದೇವೆ. ಅದರಂತೆ ಮುಸ್ಲಿಂ ಧಾರ್ಮಿಕ ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಶಾಸಕರ ಹೇಳಿಕೆ ಸರಿಯಲ್ಲ ಎಂದು ಸಲೀಂ ಅಹಮ್ಮದ್ ಅವರು ಕಿಡಿಕಾರಿದ್ದಾರೆ.








