ಕಾಂಗ್ರೆಸ್ಸಿನವರಿಗೆ ಮಾಡೋಕೆ ಕೆಲಸ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದಾರೆ: ಕೆ.ಸಿ.ನಾರಾಯಣಗೌಡ Saaksha Tv
ಮಂಡ್ಯ: ಕಾಂಗ್ರೆಸ್ಸಿನವರಿಗೆ ಮಾಡೋಕೆ ಕೆಲಸ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದರಲ್ಲಿ ಅವರು ರಾಜಕಾರಣ ಮಾಡಲು ಹೊರಟಿದ್ದಾರೆ, ಆದರೆ ಇದು ರಾಜಕಾರಣ ಮಾಡೊ ಸಮಯವಲ್ಲ. ಕೊರೊನಾ ವಿರುದ್ಧ ಹೋರಾಡಲು ಸರಕಾರದ ಜೊತೆ ಸಹಕರಿಸುವ ಬದಲು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸುತ್ತಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಇಂದಿನಿಂದ ಪಾದಯಾತ್ರೆ ಆರಂಭಿಸಿದೆ. ಈ ಬಗ್ಗೆ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ಮೇಕೆದಾಟು ಯೋಜನೆಯು ನಮ್ಮ ಸರಕಾರದ ಕೂಸಾಗಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ನ ತೀರ್ಪು ಬಂದ ಮೇಲೆ ಕೆಲಸವನ್ನು ಮಾಡುತ್ತೇವೆ. ಇದು ಕಾಂಗ್ರೆಸ್ ನವರಿಗು ಗೊತ್ತಿದೆ. ಆದರೂ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ. ಪಾದೆಯಾತ್ರಗೆ ತಡೆದರೆ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕೊರೊನಾ ಹೆಚ್ಚುತ್ತಿರುವ ಸಮಯದಲ್ಲಿ ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೊನಾ ಹರಡಿದರೆ ಅದರ ಜವಾಬ್ದಾರಿ ಅವರೇ ಹೊರಬೇಕು. ಪಾದಯಾತ್ರೆಗೆ ನಾಲ್ಕು ಜನರಿಗೆ ಮಾತ್ರ ಅವಕಾಶ ನೀಡಿದ್ದೇವೆ, ಆದರೆ ಅವರು ಸಾವಿರಾರು ಜನರನ್ನು ಸೇರಿಸಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಾದಯಾತ್ರೆಗೆ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.









