ಬೆಂಗಳೂರು: ಬಿಜೆಪಿ ಸರ್ಕಾರದ (BJP government) ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಕಾಲದ ಹಗರಣ ಆರೋಪ ಪ್ರಕರಣದ (Covid Scam Case) ವರದಿ ಸಲ್ಲಿಕೆ ಆಗಿದೆ.
ಕೋವಿಡ್ ಸಂದರ್ಭದಲ್ಲಿ 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ (Congress) ನಾಯಕರಿಗೆ ಈಗ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಜಸ್ಟೀಸ್ ಜಾನ್ ಮೈಕಲ್ ಡಿ. ಕುನ್ಹಾ (John Michael DCunha) ನೇತೃತ್ವದ ಆಯೋಗ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ (Siddaramaiah) ಭೇಟಿ ಮಾಡಿ ವರದಿ ಸಲ್ಲಿಸಿದೆ. ಈ ಬೆನ್ನಲ್ಲೇ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವ ಎಂ.ಬಿ ಪಾಟೀಲ್, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಚರ್ಚೆ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಾಲದ ಹಗರಣಗಳ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ತನಿಖಾ ಆಯೋಗ ರಚಿಸಲಾಗಿತ್ತು. ವೆಂಟಿಲೇಟರ್‌ಗಳ ಖರೀದಿ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಲೋಪ, ಅಕ್ರಮಗಳ ಆರೋಪದ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು. ಆಯೋಗ ರಚನೆಯಾಗಿ ವರ್ಷದೊಳಗೆ ತನಿಖಾ ವರದಿ ಸಲ್ಲಿಕೆಯಾಗಿದೆ.