ಕೊಪ್ಪಳ : ರಾಜ್ಯ ಸರ್ಕಾರ ಕೊರೊನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದು, ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದಾರೆ. ಈ ಬಗ್ಗೆ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ನೀಡಿ, ಬಿಜೆಪಿ ಮತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಪಾಟೀಲ್, ಕಾಂಗ್ರೆಸ್ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ ಹಾಗಾಗಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಕೋವಿಡ್-19 ವಿಚಾರದಲ್ಲಿ ಕಾಂಗ್ರೆಸ್ ಮಾಡಿದ ಆರೋಪಕ್ಕೆ ಐವರು ಸಚಿವರು ಲೆಕ್ಕ ಕೊಟ್ಟರೂ ಕೈ ನಾಯಕರು ಲೆಕ್ಕ ಲೆಕ್ಕ ಎನ್ನುತ್ತಿದ್ದಾರೆ ವ್ಯಂಗ್ಯವಾಡಿದರು.
ಇನ್ನು ನಮ್ಮ ಸರ್ಕಾರದಲ್ಲಿ ಯಾವುದೇ ಅಕ್ರಮ ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ನೀಡಿ, ಬಿಜೆಪಿ ಮತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಮುಂದಾಗಿದ್ದಾರೆ. ಇದು ಆಗದ ಕೆಲಸ. ಕೋವಿಡ್-19 ಜಗತ್ತಿಗೆ ಹೊಸದು ಆರೋಗ್ಯ ಇಲಾಖೆ ಉಪಕರಣದ ಬೇಡಿಕೆ ಮತ್ತು ಸಪ್ಲೈಯಲ್ಲಿ ಅಸಮತೋಲನ ಉಂಟಾಯ್ತು. ಈ ಕಾರಣಕ್ಕೆ ಒಂದಷ್ಟು ಹಣ ಹೆಚ್ಚು ನೀಡಿ ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ.