ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಜೆಡಿಎಸ್ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದೆ. ವೈಯಕ್ತಿಕ ನಿಂದನೆ, ಹಳೆಯ ಹಗರಣಗಳು ಮತ್ತು ಲೈಂಗಿಕ ಹಗರಣಗಳ ಪ್ರಸ್ತಾಪದೊಂದಿಗೆ ಉಭಯ ಪಕ್ಷಗಳ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ಹಾಸನ್ ಬ್ಲೂ ಚಿತ್ರ ವರ್ಲ್ಡ್ ಫೇಮಸ್ ಆಗಿದ್ದು, ಹಾಲಿವುಡ್ ವರೆಗೂ ಕೀರ್ತಿ ಪತಾಕೆ ಹಾರಿಸಿದೆ ಎಂದು ಕಾಂಗ್ರೆಸ್ ಜೆಡಿಎಸ್ ನಾಯಕರನ್ನು ವ್ಯಂಗ್ಯವಾಗಿ ಚುಚ್ಚಿದ್ದರೆ, ಅತ್ತ ಜೆಡಿಎಸ್ ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ಟೆಂಟ್ ಸಿನಿಮಾ, ಸಿಡಿ ಫ್ಯಾಕ್ಟರಿ ಅಸ್ತ್ರ ಪ್ರಯೋಗಿಸಿದೆ.
ಆಡಳಿತಾನುಭವದ ಬಗ್ಗೆ ಕುಮಾರಸ್ವಾಮಿ ಸವಾಲು
ಜೆಡಿಎಸ್ ಮತ್ತು ಬಿಜೆಪಿ ವಿಲೀನದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ನಮ್ಮ ವಿಲೀನದ ಚಿಂತೆ ಬಿಡಿ, ಆಡಳಿತಾನುಭವದ ಬಗ್ಗೆ ಚರ್ಚಿಸೋಣ ಎಂದು ಸವಾಲು ಹಾಕಿದ್ದರು. ಕೊಳ್ಳೆ, ಸುಲಿಗೆ, ಕಮಿಷನ್ ದಂಧೆ, ಫಿಕ್ಸಿಂಗ್ ಮತ್ತು ಭೂಕಬಳಿಕೆ ಮಾಡುವುದು ನನ್ನ ಅನುಭವವಲ್ಲ. ಅಂತಹ ಭಾರೀ ಅನುಭವ ನನಗಿಲ್ಲ ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಡಿಕೆಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಅಲ್ಲದೆ, ಬಳ್ಳಾರಿಯಲ್ಲಿ ಗೃಹ ಸಚಿವರ ಬದಲಿಗೆ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಗೃಹ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು. ಮಂತ್ರಿ ಹುದ್ದೆಯ ಶಿಷ್ಟಾಚಾರ ತಿಳಿಯದ ನೀವು, ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನಾದರೂ ಮಾಡಿದ್ದೀರಾ? ಗೃಹ ಸಚಿವರು ಕೇವಲ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದರು.
ಕೊಚ್ಚೆ ಎಂದು ಜರೆದ ಕಾಂಗ್ರೆಸ್
ಕುಮಾರಸ್ವಾಮಿ ಅವರ ಟೀಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, ಕುಮಾರಸ್ವಾಮಿಯವರನ್ನು ಮೀಡಿಯಾ ಹುಲಿ ಎಂದು ಲೇವಡಿ ಮಾಡಿದೆ. ಕುಮಾರಸ್ವಾಮಿ ಅವರ ಅನುಭವದ ಕಾಲುವೆಯಲ್ಲಿ ಹರಿಯುತ್ತಿರುವುದು ಬರೀ ಸುಳ್ಳು, ಹಿಟ್ ಅಂಡ್ ರನ್ ಮತ್ತು ಅವಕಾಶವಾದದ ಕೊಚ್ಚೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಶವದ ಡಬಲ್ ಪೋಸ್ಟ್ ಮಾರ್ಟಮ್ ಮತ್ತು ಮಂಡ್ಯದಲ್ಲಿ ಕೈಗಾರಿಕೆಗೆ ಜಮೀನು ನೀಡದ ಆರೋಪಗಳನ್ನು ಪ್ರಸ್ತಾಪಿಸಿ, ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ.
ಅಲ್ಲದೆ, ಬಿಡದಿಯ ಕೇತಗಾನಹಳ್ಳಿಯಲ್ಲಿ ದಲಿತರ ಜಮೀನಿಗೆ ಬೇಲಿ ಹಾಕಿದವರು ಯಾರು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಕುಮಾರಸ್ವಾಮಿ ಅವರು ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಕೈಜೋಡಿಸುವ ಸಮಯಸಾಧಕರು. ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೆಸರನ್ನು ಒರೆಸಿಕೊಂಡು ಕಮಲವನ್ನು ಹಿಡಿದುಕೊಳ್ಳಿ. ನಿಮ್ಮ ಅನುಭವ ಎಷ್ಟು ಪ್ರಖರವಾಗಿ ಪ್ರಜ್ವಲಿಸುತ್ತಿದೆ ಎಂಬುದು ಜಗತ್ತಿಗೆ ಗೊತ್ತು ಎಂದು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಪ್ರಸ್ತಾಪಿಸಿತ್ತು.
ಸಿಡಿ ಫ್ಯಾಕ್ಟರಿ ಮತ್ತು ಟೆಂಟ್ ಸಿನಿಮಾ ಅಸ್ತ್ರ
ಕಾಂಗ್ರೆಸ್ ಟೀಕೆಗೆ ಪ್ರತಿಯಾಗಿ ಜೆಡಿಎಸ್ ನಾಯಕರು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಸಿಡಿ ಫ್ಯಾಕ್ಟರಿ ಮಾಲೀಕರು, ಟೆಂಟ್ ನಲ್ಲಿ ನೀಲಿ ಸಿನಿಮಾ ತೋರಿಸಿದ ದಂಧೆಕೋರರು ಎಂದು ಜರೆದಿದೆ. ಕಲೆಕ್ಷನ್ ಗಿರಾಕಿಗಳ ಆತ್ಮರತಿ ಮಸಾಜ್ ಪಾರ್ಲರ್ ಗಳಲ್ಲಿ ಇರುತ್ತದೆ ಹೊರತು ಜನಸೇವೆಯಲ್ಲಿ ಅಲ್ಲ. ಹನಿಟ್ರಾಪ್ ಅಧ್ಯಕ್ಷನ ಆತ್ಮರತಿಗೆ ಎಷ್ಟೋ ಶಾಸಕರು ಮತ್ತು ಮಂತ್ರಿಗಳು ಬಲಿಪಶುವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ರೌಡಿ ರಾಜಕಾರಣ ಮತ್ತು ಬ್ಲ್ಯಾಕ್ ಮೇಲ್ ತಂತ್ರವೇ ಕಾಂಗ್ರೆಸ್ ನಾಯಕರ ಬಂಡವಾಳ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಹಾಸನ್ ಬ್ಲೂ ಮತ್ತು ಹಾಲಿವುಡ್ ಖ್ಯಾತಿ
ಜೆಡಿಎಸ್ ನ ಟೆಂಟ್ ಸಿನಿಮಾ ಟೀಕೆಗೆ ಕಾಂಗ್ರೆಸ್ ನೀಡಿದ ಪ್ರತ್ಯುತ್ತರ ಈಗ ವೈರಲ್ ಆಗಿದೆ. ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ಹಾಸನ್ ಬ್ಲೂ ಚಿತ್ರ ವರ್ಲ್ಡ್ ಫೇಮಸ್ ಆಗಿದೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ ಎಂದು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ವ್ಯಂಗ್ಯವಾಡಿದೆ.
ನಿಮ್ಮದು ಸೆಕ್ಯೂರ್ಡ್ ಬ್ಲೂ ಬಾಯ್ಸ್ ಪಾರ್ಟಿ. ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು ಮತ್ತು ಪಾತ್ರಧಾರಿಗಳು ತುಂಬಿ ತುಳುಕುತ್ತಿದ್ದಾರೆ. ಅವರು ಈಗಲೂ ಜೈಲಿನಲ್ಲಿ ನೀಲ ಮೇಘ ಶ್ಯಾಮ ಹಾಡುತ್ತಿದ್ದಾರೆ. ಇನ್ನೊಬ್ಬ ನಾಯಕರು ಲಿಂಬೆ ಹಣ್ಣಿನಂತ ಹಾಡು ಹೇಳಲು ಹೋಗಿ ಜೈಲಿನಲ್ಲಿ ಮುದ್ದೆ ಮುರಿದು ಬಂದಿದ್ದಾರೆ ಎಂದು ರೇವಣ್ಣ ಅವರನ್ನು ಪರೋಕ್ಷವಾಗಿ ಕುಟುಕಿದೆ.
ನಿಮ್ಮ ನಾಯಕರೇ ನಿರ್ಮಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟ್ ನಲ್ಲಿ ಸಿನಿಮಾ ತೋರಿಸುವ ಅವಕಾಶ ಎಲ್ಲಿದೆ? ನಿಮ್ಮ ಸಿನಿಮಾ ಚೆನ್ನಾಗಿದೆ, ಅದರ ಮೇಲೆ ಕಥೆ ಕಟ್ಟಲು ಹೋಗಬೇಡಿ. ಸುಮ್ಮನೆ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಆಡಳಿತ ಮತ್ತು ಅಭಿವೃದ್ಧಿ ವಿಷಯಗಳಿಗಿಂತ ನಾಯಕರ ವೈಯಕ್ತಿಕ ನಿಂದನೆ ಮತ್ತು ಹಳೆಯ ಹಗರಣಗಳ ಕೆದಕುವಿಕೆಯೇ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.








