ದೆಹಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪರಮಾಪ್ತ, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬ್ಯಾಂಕ್ ವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು ಅಹ್ಮದ್ ಪಟೇಲ್ ಮನೆಯಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಹ್ಮದ್ ಪಟೇಲ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದು, ಅವರ ದೆಹಲಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಇನ್ನು ಅಹ್ಮದ್ ಪಟೇಲ್ ವಿರುದ್ಧ ಬಹುಕೋಟಿ ಸಂದೇಸರ ಹಗರಣದಲ್ಲಿ ಸಂದೇಸರ ಕಂಪನಿಯಿಂದ ಹಣ ಪಡೆದಿರುವ ಆರೋಪ, ಆಂಧ್ರ ಬ್ಯಾಂಕ್ ನಿಂದ 5,000 ಕೋಟಿ ಸಾಲ ಪಡೆದು ಅದನ್ನು ವಿದೇಶಕ್ಕೆ ವರ್ಗಾವಣೆ ಮಾಡಿರುವ ಆರೋಪ, ಸ್ಟೆರ್ಲಿಂಗ್ ಬಯೋಟೆಕ್ ಕಂಪನಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪಗಳು ಕೇಳಿಬಂದಿವೆ.