ಕಾಂಗ್ರೆಸ್ ನಾಯಕ ಟ್ವಿಟ್ಟರ್ ಖಾತೆ ಲಾಕ್
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ ಬಿನ್ನೆಲೆ ಕಾಂಗ್ರೆಸ್ ನ ಪ್ರಮುಖ ನಾಯಕ ಟ್ವಿಟ್ಟರ್ ಖಾತೆಗಳನ್ನೂ ಸಹ ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕೆನ್, ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕ್ಕಂ ಟಾಗೋರ್, ಪಕ್ಷದ ಅಸ್ಸೋಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳನ್ನು ಅಮಾನತು ಮಾಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಕಾರ್ಯದರ್ಶಿ ಪ್ರಣವ್, ಎಲ್ಲರಿಗೂ ಅನ್ಯಾಯವಾಗಿದೆ ಈ ಬಗ್ಗೆ ಪಕ್ಷ ಪ್ರತಿಭಟನೆಯನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟ್ಟರ್ ಕ್ರಮ ಕೈಗೊಂಡಿದೆ. ನಾವು ಕಾಲಾಪಾನಿಯಿಂದಲೂ ಹೋರಾಟದ ಇತಿಹಾಸ ಹೊಂದಿದ್ದೇವೆ ಎಂಬುವುದು ಮೋದಿಜಿಗೆ ಅರ್ಥವಾಗುತ್ತಿಲ್ಲ. ಟ್ವಿಟ್ಟರ್ ಲಾಕ್ ಮಾಡಿದರೆ ನಾವು ಹೋರಾಟ ಮಾಡದಂತೆ ತಡೆಯಬಹುದು ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.