ಬಿಜೆಪಿಗರಿಗೆ ಅಸ್ತ್ರವಾದ ರಮೇಶ್ ಕುಮಾರ್ ‘ಋಣ ಸಂದಾಯ’ ಹೇಳಿಕೆ
ಗಾಂಧಿ ಕುಟುಂಬದ ಸಹಕಾರದಿಂದ ನಾವೆಲ್ಲಾ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಸಂಪಾದನೆ ಮಾಡಿದ್ದೇವೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯಿಂದ ಬಿಜೆಪಿಗರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಗುರಿಪಡಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ರಮೇಶ್ ಕುಮಾರ್ ಈ ಹೇಳಿಕೆ ನೀಡಿದ್ದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವ್ಯಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ? ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ? ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.
ರಮೇಶ್ ಕುಮಾರ್ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಕಾಂಗ್ರೆಸ್ ನಾಯಕರು ಮತ್ತು ಗಾಂಧಿ ಪರಿವಾರ ಈ ದೇಶದ ಸಂಪತ್ತನ್ನು ಲೂಟಿ ಹೊಡೆದಿರುವುದು ಸಮಸ್ತ ಭಾರತೀಯರಿಗೆ ಗೊತ್ತಿರುವ ಸಂಗತಿ. ಆದರೆ ರಮೇಶ್ ಕುಮಾರ್ ಬಹಿರಂಗವಾಗಿ ಈ ಸತ್ಯವನ್ನು ಹೇಳುವ ಧೈರ್ಯ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ 60 ವರ್ಷಗಳ #LootIndia ಕಾರ್ಯಕ್ರಮವನ್ನ ಅತ್ಯಂತ ಸೊಗಸಾಗಿ ವರ್ಣಿಸಿದ ಮೇಧಾವಿ ನಾಯಕರಿಗೆ ಅಭಿನಂದನೆಗಳು!
ನಿಮ್ಮ ಪಕ್ಷದ ಹಿರಿಯ ನಾಯಕರೇ ಇಷ್ಟು ಪ್ರಾಮಾಣಿಕವಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಒಪ್ಪಿಕೊಂಡಮೇಲೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ @INCIndia ನಾಯಕರೇ? ಎಂದು ಸುಧಾಕರ್ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ.








