ಬೆಂಗಳೂರು: ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆಗೆ ಸಿದ್ದತೆ ನಡೆದಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಮನೆಗಳ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.
ಸಿಬಿಐ ದಾಳಿ ಖಂಡಿಸಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ಮನೆ ಹಾಗೂ ಡಿ.ಕೆ ಸುರೇಶ್ರ ದೊಡ್ಡ ಆಲಹಳ್ಳಿಯ ಡಿ.ಕೆ ಸುರೇಶ್ ಮನೆಗಳ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಶಿ, ಡಿಕೆ ಸುರೇಶ್ ಪರ ಜೈಕಾರ ಕೂಗುತ್ತಿದ್ದಾರೆ.
ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಮನೆಗಳ ಎದುರು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್ ಹಾಕಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಬಳ್ಳಾರಿ ರಸ್ತೆಯ ಸಿಬಿಐ ಕಚೇರಿ ಎದುರೂ ಕೂಡ ಬ್ಯಾರಿಕೇಡ್ ಅಳವಡಿಕೆ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಬಿಗಿಗೊಳಿಸಲಾಗಿದೆ.
ಸಿಬಿಐ ದಾಳಿಗೆ ಕೈ ನಾಯಕರ ಖಂಡನೆ..!
ಡಿಕೆ ಸಹೋದರರ ಮನೆಗಳ ಮೇಲೆ ಉಪಚುನಾವಣೆ ಸಂದರ್ಭದಲ್ಲಿ ಸಿಬಿಐ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸದ ಬಳಿ ಬಂದಿದ್ದ ಹಿರಿಯ ವಕೀಲ ಪೊನ್ನಣ್ಣ, ಸಿಬಿಐ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.
ಕೋರ್ಟ್ ಅನುಮತಿ ಪಡೆದು ದಾಳಿ ಮಾಡಲಿ, ನ್ಯಾಯಬದ್ಧವಾದ ತನಿಖೆ ಮಾಡಿದರೆ ಅದಕ್ಕೆ ನಮ್ಮ ಆಕ್ಷೇಪ ವಿಲ್ಲ. ಆದರೆ, ಕೋರ್ಟ್ ಯಥಾಸ್ಥಿತಿಗೆ ಸೂಚನೆ ದಾಳಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗಾಗಿ ಇದು ರಾಜಕೀಯ ಪ್ರೇರಿತವಾದ ದಾಳಿ. ಚುನಾವಣೆ ಸಂದರ್ಭದಲ್ಲಿ ದಾಳಿ ನಡೆದಿದ್ದು, ಸಿಬಿಐ ಕ್ರಮ ಖಂಡಿಸಿ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಡಿಕೆಶಿ ಪರ ವಕೀಲ ಪೊನ್ನಣ್ಣ ಆರೋಪಿಸಿದರು.
ಇದು ರಾಜಕೀಯ ಪ್ರೇರಿತ ದಾಳಿ, ಉಪಚುನಾವಣೆಯಲ್ಲಿ ಡಿಕೆಶಿ ಶಕ್ತಿ ಕುಂದಿಸಲು ನಡೆದಿರುವ ಪ್ರಯತ್ನವಾಗಿದೆ. ಬಿಜೆಪಿಯ ಷಡ್ಯಂತ್ರ ಎಂದು ಡಿಕೆಶಿ ಆಪ್ತ ಹಾಗೂ ಕಾರ್ಪೋರೇಟರ್ ಆಂಜನಪ್ಪ ಆರೋಪಿಸಿದ್ದಾರೆ.
ಉಪಚುನಾವಣೆಗೆ ಒಂದು ತಿಂಗಳು ಇರುವಾಗ ದಾಳಿ ಮಾಡಿರುವುದರ ಉದ್ದೇಶ ಏನು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಖಂಡಿಸಿದ್ದಾರೆ.