ಬೆಂಗಳೂರು: ಶಿರಾ ಹಾಗೂ ಆರ್.ಆರ್ ನಗರ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಕಾವು ಪಡೆದುಕೊಂಡಂತೆಯೇ ರಾಜಕೀಯ ಪಕ್ಷಗಳ ನಾಯಕರ ನಡುವೆ ಏಟು-ಎದಿರೇಟು, ಆರೋಪ ಪ್ರತ್ಯಾರೋಪ ಶುರುವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಡು ಮನುಷ್ಯನಿಗೆ ಹೋಲಿಸಿದ್ದು, ಜನಾರ್ದನ ಪೂಜಾರಿ ಹೇಳಿದ್ದ ಶನಿ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡಿ ಬಿಜೆಪಿ ತಿರುಗೇಟು ನೀಡಿದೆ.
ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಿನಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಟ್ಟುಬರಲಿ ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಗುಡುಗಿದ್ದಾರೆ.
ಬಿಜೆಪಿ ಸೇರಬೇಕಾದರೆ 10 ವರ್ಷ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಬೇಕೆಂದು ಕೆ.ಎಸ್ ಈಶ್ವರಪ್ಪ ಹೇಳಿದ್ದರು. ಈ ನಳಿನ್‍ಕುಮಾರ್ ಕಟೀಲ್‍ರನ್ನು ಇನ್ನೂ 10 ವರ್ಷ ಬಿಜೆಪಿ ಕಚೇರಿಯ ಕಸ ಗುಡಿಸಲು ಹಚ್ಚಿದರೆ ಬುದ್ದಿ ಬರಬಹುದೇನೋ ಎಂದು ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಕಟೀಲ್‍ಗೆ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬಿಲ್ಲ. ಈ ಎಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಮುಖ್ಯಮಂತ್ರಿ ವಿರುದ್ಧ ಅವರ ಶಾಸಕರೇ ಟೀಕಿಸುತ್ತಿದ್ದರೂ ಕ್ರಮಕೈಗೊಳ್ಳುವ ತಾಕತ್ತು ಇಲ್ಲ. ಆದರೆ, ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ ಎಂದು ಮತ್ತೊಂದು ಟ್ವಿಟರ್ ನಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ `ಸಂತೋಷ’ಕ್ಕಾಗಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವ ಕೆಲಸ ಅಲ್ಲ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಡವುದು, ಈಗ ಅದನ್ನೇ ಮಾಡ್ತಾ ಇದ್ದಾರೆ ಎಂದು ಪ್ರಹಾರ ನಡೆಸಿದ್ದಾರೆ.
ಸಿದ್ದುಗೆ ಗುದ್ದು ನೀಡಿದ ಬಿಜೆಪಿ..!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರನ್ನು ಕಾಡು ಮನುಷ್ಯ ಎಂದು ಟೀಕಿಸಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವಿಟ್ಟರ್‍ನಲ್ಲಿ ವಾಗ್ಬಾಣ ನಡೆಸಿದೆ.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ, ಅದನ್ನು ಮುಗಿಸಿಯೇ ಹೋಗುತ್ತಾರೆ ಎಂದು ಜನಾರ್ದನ ಪೂಜಾರಿ ನೀಡಿದ ಹೇಳಿಕೆಯನ್ನು ಟ್ಯಾಗ್ ಮಾಡಿರುವ ಬಿಜೆಪಿ, ಜನಾರ್ದನ ಪೂಜಾರಿ ಮಾತುಗಳಲ್ಲಿ ಅತಿಶಯೋಕ್ತಿ ಇಲ್ಲ. ನಿಮ್ಮ ಸಾಹಸಗಾಥೆಯನ್ನು ಖರ್ಗೆ, ಪರಮೇಶ್ವರ್, ಡಿಕೆಶಿ ಅವರ ಬಳಿ ಕೇಳಿ ನೋಡಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಕಟೀಲ್ ಎಂದಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡ ಖಂಡಿಸಿದ್ದಾರೆ. ಈ ವ್ಯಕ್ತಿ ಪ್ರಗತಿಪರ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಆದರೆ, ಈತ ರಾಜ್ಯವನ್ನು ಧರ್ಮದ ಹೆಸರಿನಲ್ಲಿ ಒಡೆದು ಆಳುವ ಕೆಲಸ ಮಾಡಿದರು. ಸತತ ಸೋಲು, ಹಿನ್ನಡೆಯಿಂದ ಪಕ್ಷದಲ್ಲಿನ ಪ್ರತಿಸ್ಪರ್ಧಿಗಳನ್ನು ನಿಯಂತ್ರಿಸಲಾಗದ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.
ಡಿ.ಜೆ ಹಳ್ಳಿಯಲ್ಲಿ ಗಲಭೆ ನಡೆಸಿದವರ ಪರವಾಗಿ ನೀವು ಯಾಕೆ ವಕಾಲತ್ತು ವಹಿಸಿದ್ದೀರಿ ? ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸಿದ ನೀವು ಈಗ, ಗಲಭೆಯ ರೂವಾರಿ ಸಂಪತ್‍ರಾಜ್ ಅವರಿಗೆ ಚುನಾವಣಾ ಜವಾಬ್ದಾರಿ ಕೊಟ್ಟಿದ್ದೀರಿ. ನಿಮ್ಮದೇ ದಲಿತ ಶಾಸಕನ ಪರ ನಿಲ್ಲುವ ತಾಕತ್ತು ನಿಮಗಿಲ್ಲವೇ ಎಂದು ಮತ್ತೊಂದು ಟ್ವೀಟ್‍ನಲ್ಲಿ ಬಿಜೆಪಿ ಕುಟುಕಿದೆ.
ನಿಮ್ಮ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ ಕುತಂತ್ರಿ ನೀವಲ್ಲವೇ ? ನಳಿನ್‍ಕುಮಾರ್ ಕಟೀಲ್ ನಾಯಕತ್ವದಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಸಿಎಂ ಯಡಿಯೂರಪ್ಪ ಅವರ ಗದ್ದುಗೆ ಬಲಪಡಿಸಿದ್ದೇವೆ. ಬದಾಮಿಯಲ್ಲಿ ನೀವು ಗೆದ್ದಿದ್ದು ಕೇವಲ 1696 ಮತಗಳಿಂದ. ಅಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ನಡೆಸಬೇಕೀತ್ತು ಎಂದು ಸಿದ್ದರಾಮಯ್ಯ ಅವರ ಕಾಡುಮನುಷ್ಯ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel