ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ ಕಾಂಗ್ರೇಸ್ ಶಾಸಕರು Saaksha Tv
ಬೆಂಗಳೂರು: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಸಚಿವ ಕೆ.ಎಸ್. ಈಶ್ವರಪ್ಪ ಅವರು ನೀಡಿದ ಕೇಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದು ಹೇಳಿಕೆಯನ್ನು ಖಂಡಿಸಿ ಸದನದಲ್ಲೇ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಇಂದು ಮಧ್ಯಾಹ್ನ ಪ್ರಾರಂಭವಾದ ಅಧಿವೇಶನದಲ್ಲಿ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಪೀಕರ್ ನಾಳೆ ಬೆಳಗ್ಗೆ 11 ಗಂಟೆಗೆ ಸದನ ಕಲಾಪವನ್ನು ಮುಂದೂಡಿದರು. ಇತ್ತ ಸದನ ಮುಂದೂಡಿಕೆಯಾದರು ಕೈ ಶಾಸಕರು ತಮ್ಮ ಧರಣಿ ಮುಂದುವರಿಸಿದ್ದಾರೆ.
ಈ ಮುಂಚೆ ನಿರ್ಧರಿಸಿದಂತೆ ಕಾಂಗ್ರೆಸ್ನ ಎಲ್ಲಾ ಶಾಸಕರು ಸದನದಲ್ಲೇ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. 69 ಕೈ ಶಾಸಕರೂ ಸದನದಲ್ಲೇ ಉಳಿಯುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು. ಯಾರೆಲ್ಲಾ ಹೊರಕ್ಕೆ ಹೋಗಿದ್ದಾರೆ ಅವರೆಲ್ಲರನ್ನೂ ಸದನದ ಒಳಕ್ಕೆ ಕರೆಸುವಂತೆ ಸೂಚಿಸಿದರು.
ಧರಣಿಗೆ ಕೂತ ಕೈ ಶಾಸಕರ ಮನವೊಲಿಕೆಗೆ ಸಿಎಂ ಬೊಮ್ಮಾಯಿ ಯತ್ನಿಸಿದರು. ಅಹೋರಾತ್ರಿ ಧರಣಿ ಕೈಬಿಡಿ, ನಾಳೆ ಬಳೆಗ್ಗೆ ಕಲಾಪ ಆರಂಭವಾದ ಬಳಿಕ ಧರಣಿ ಮುಂದುವರಿಸಿ ಎಂದು ಮನವಿ ಮಾಡಿದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಹೋರಾತ್ರಿ ಪ್ರತಿಭಟನೆ ಕೈ ಬಿಡಲು ನಿರಾಕರಿಸಿದರು.
ಇನ್ನೂ ಕಾಂಗ್ರೆಸ್ ಶಾಸಕರು ಸದನದಲ್ಲೇ ಅಹೋರಾತ್ರಿ ಧರಣಿ ಮಾಡುತ್ತಿರುವ ಹಿನ್ನೆಲೆ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ ಅಧಿಕಾರಿಗಳಿಗೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು. ಧರಣಿನಿರತ ಶಾಸಕರಿಗೆ ರಾತ್ರಿಗೆ ಸಸ್ಯಾಹಾರಿ ಊಟ, ಹಾಸಿಗೆ, ಟೀ-ಕಾಫಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಶಾಲಾಕ್ಷಿ ತಿಳಿಸಿದರು.