Congress President: ಖರ್ಗೆ ಅಥವಾ ತರೂರ್ ? ಅಧ್ಯಕ್ಷ ಸ್ಥಾನಕ್ಕೆ ಮತ ಎಣಿಕೆ ಶುರು
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಮತ ಎಣಿಕೆ ಶುರುವಾಗಿದೆ. ಇದರೊಂದಿಗೆ 24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಇಂದು ಸಂಜೆ 4 ಗಂಟೆಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸೋಮವಾರ (ಅಕ್ಟೋಬರ್ 17) ಮತದಾನ ನಡೆದಿತ್ತು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಲವು ಹಿರಿಯ ನಾಯಕರು ಸೇರಿದಂತೆ ಸುಮಾರು 9500 ಪ್ರತಿನಿಧಿಗಳು ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸಿದರು. ಸೋಮವಾರದಂದು ಶೇ 96ರಷ್ಟು ಮತದಾನವಾಗಿದೆ.
ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಇದುವರೆಗೆ 1939, 1950, 1977, 1997 ಮತ್ತು 2000 ರಲ್ಲಿ ಚುನಾವಣೆಗಳು ನಡೆದಿವೆ. 22 ವರ್ಷಗಳ ನಂತರ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಈ ಮೊದಲು ಸೀತಾರಾಮ್ ಕೇಸರಿ ಅವರು ಗಾಂಧಿಯೇತರ ಅಧ್ಯಕ್ಷರಾಗಿದ್ದರು.
ಮತ ಎಣಿಕೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ದೇಶದ ಎಲ್ಲಾ ಮತಗಟ್ಟೆಗಳಿಂದ ಕಾಂಗ್ರೆಸ್ ಕೇಂದ್ರ ಕಚೇರಿಗೆ ಮತಪೆಟ್ಟಿಗೆಗಳನ್ನು ತರಲಾಗಿದೆ. ಅವುಗಳನ್ನ ಕಾಂಗ್ರೆಸ್ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಪಕ್ಷದ ಕೇಂದ್ರ ಕಚೇರಿಯಲ್ಲಿಯೇ ಮತ ಎಣಿಕೆ ನಡೆಯಲಿದೆ.
Congress President: Kharge or Tharoor? Counting of votes for the post of President has started







